ಸೆ.22-26ರವರೆಗೆ ಮೂಡುಬಿದಿರೆಯಲ್ಲಿ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ

ಸೆ.22-26ರವರೆಗೆ ಮೂಡುಬಿದಿರೆಯಲ್ಲಿ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ


ಮೂಡುಬಿದಿರೆ : ಇಲ್ಲಿನ ಸಮಾಜ ಮಂದಿರ ಸಭಾ(ರಿ)ದ ವತಿಯಿಂದ ಸೆ.22 ರಿಂದ 26 ರ ವರೆಗೆ ಐದು ದಿನಗಳ ಕಾಲ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವು  ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಅವರು ತಿಳಿಸಿದ್ದಾರೆ. 

ಅವರು ಗುರುವಾರ ಸಂಜೆ ಸಮಾಜ ಮಂದಿರದ ಮೀಟಿಂಗ್ ಹಾಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.


ದಸರಾ ಉತ್ಸವದ ಸಂಚಾಲಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಮಾತನಾಡಿ ಸೆ.22 ರಂದು ಸಂಜೆ ಸಂಜೆ 7 ಕ್ಕೆ ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಭಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನವಮಿ ಸಮೂಹ ಸಂಸ್ಥೆಗಳ ನಂದಕುಮಾರ್ ಆರ್.ಕುಡ್ವ ಅವರಿಗೆ 'ಸಮಾಜ ಮಂದಿರ ಪುರಸ್ಕಾರ' ನೀಡಲಾಗುವುದು, ಬಳಿಕ ಸಂತೋಷ್ ಕುಮಾರ್ ಮತ್ತು ಬಳಗದ ‘ ಸವಿಗಾನ ಮೆಲೋಡಿಸ್’ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

23 ರಂದು ಸಂಜೆ 7 ರಿಂದ ನ್ಯೂ ವೈಬ್ರೆಂಟ್ ಕಾಲೇಜಿನ ನಿರ್ದೇಶಕರಾದ ಚಂದ್ರಶೇಖರ ರಾಜೇ ಅರಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಂಗಳೂರು ವಿ‌.ವಿ.ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಅವರು ‘ ಭಾಷೆ ಮತ್ತು ಸಂಸ್ಕೃತಿ’ ಕುರಿತು ಉಪನ್ಯಾಸ ನೀಡಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಮಯೂರ ಪ್ರತಿಷ್ಠಾನ, ಮಂಗಳೂರು ಇವರಿಂದ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ, ರಕ್ಷಿತ್ ಪಡ್ರೆ ಅವರ ನಿರ್ದೇಶನದಲ್ಲಿ ‘ಪಾದ ಪ್ರತೀಕ್ಷಾ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

24 ರಂದು ಸಂಜೆ 7 ರಿಂದ ವರ್ಧಮಾನ ಪ್ರಶಸ್ತಿ ಪ್ರಧಾನ ನಡೆಯಲಿದ್ದು ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ವರ್ಧಮಾನ ಪ್ರಶಸ್ತಿ ಪೀಠದ ಅಧ್ಯಕ್ಷರಾದ ಎಸ್.ಡಿ.ಸಂಪತ್ ಸಾಮ್ರಾಜ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರೇಮಶೇಖರ ಉಡುಪಿ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ,ವಿಕಾಸ ಹೊಸಮನಿ ಹಾವೇರಿ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಬಳಿಕ ಸನಾತನ ನಾಟ್ಯಾಲಯ ಮಂಗಳೂರು ಇದರ ನಾಟ್ಯ ಕಲಾ ವಿದುಷಿ ಶಾರದಾ ಮಣಿಶೇಖರ್ ಅವರ ಮೂಡುಬಿದಿರೆ ಮತ್ತು ಮಂಗಳೂರಿನ ವಿದ್ಯಾರ್ಥಿಗಳಿಂದ ‘ ಸನಾತನ ನಾಟ್ಯಾಂಜಲಿ’ ನಡೆಯಲಿದೆ.

25 ರಂದು ಸಂಜೆ 7ರಿಂದ ಶಿವಪ್ರಸಾದ್ ಹೆಗ್ಡೆ ಕಣಜಾರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಕಾಲೇಜಿನ ಆಡಳಿತನಿರ್ದೇಶಕರಾದ ಡಾ‌.ಬಿ.ಪಿ.ಸಂಪತ್ ಕುಮಾರ್ ಅವರು ‘ ಪಂಪನ ಕಾವ್ಯಗಳಲ್ಲಿ ಜೀವನ ದೃಷ್ಟಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿರುವರು.ಬಳಿಕ ನಾಟ್ಯ ವಿದುಷಿ ಸುಖದಾ ಬರ್ವೆ ಅವರ ಶಿಷ್ಯರಿಂದ ‘ ನೃತ್ಯ ಸಿಂಚನ’ ನಡೆಯಲಿದೆ.

26 ರಂದು ಸಂಜೆ 7ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಹಿರಿಯ ಲೆಕ್ಕ ಪರಿಶೋಧಕರಾದ ರಘುಪತಿ ಎಸ್.ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅವರು ‘ಉನ್ನತ ಶಿಕ್ಷಣದ ಸವಾಲುಗಳು ‘ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಬಳಿಕ ಟಾಪ್ ಎಂಟರ್ಪ್ರೈಸಸ್ ಮೂಡುಬಿದಿರೆ ಅವರಿಂದ ರೂಪೇಶ್ ಕುಮಾರ್ ಅವರ ನಿರ್ದೇಶನದಲ್ಲಿ ‘ ನೃತ್ಯ ವೈವಿಧ್ಯ’ ಕಾರ್ಯಕ್ರಮ ಹಾಗೂ ಸಾಧಕರಿಗೆ ಸಮಾಜ ಮಂದಿರ ಗೌರವ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಸುರೇಶ್ ಪ್ರಭು, ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಜತೆ ಕಾರ್ಯದರ್ಶಿ ಕೆ.ಆರ್. ಪಂಡಿತ್, ಸದಸ್ಯರಾದ  ಪಿ. ರಾಮ್ ಪ್ರಸಾದ್ ಭಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article