.jpeg)
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮಾವನೇ ಆರೋಪಿ-ಸ್ನೇಹಮಯಿ ಕೃಷ್ಣ ಗಂಭೀರ ಆರೋಪ
ಬೆಳ್ತಂಗಡಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿ 2012 ಆ.9 ರಂದು ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಆಕೆಯ ಮಾವ ವಿಠಲ ಗೌಡ. ವಿಠಲ ಗೌಡನನ್ನು ಮಂಪರು ಪರೀಕ್ಷೆ ಮಾಡಬೇಕೆಂದು ಒತ್ತಾಯಿಸಿದರು.
ಈ ಪ್ರಕರಣ ಸಂಬಂಧ ಪೂರಕ ಸಾಕ್ಷಿಗಳನ್ನು ಸಂಗ್ರಹಿಸಿದ್ದು, ಇದನ್ನು ದಕ್ಷಿಣ ಕನ್ನಡ ಎಸ್ಪಿಗೆ ಹೋಗಿ ದೂರು ಸಲ್ಲಿಸುವುದಾಗಿ ತಿಳಿಸಿದ ಅವರು, ಈ ಪ್ರಕರಣದಲ್ಲಿ ಇಲ್ಲಿಯ ತನಕ ತನಿಖೆ ಮಾಡಿರದ ಹೊಸ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದರು.
ಕೊಲೆ ನಡೆದಾಗ ಸೌಜನ್ಯಳ ಬೆನ್ನಿನಲ್ಲಿ ಬ್ಯಾಗ್ ಇತ್ತು. ಇದು ಬೇರೆಯವರು ಅತ್ಯಾಚಾರ ಮತ್ತು ಕೊಲೆ ಮಾಡಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಕೊಲೆ ನಡೆದ ದಿನ ವಿಠಲ ಗೌಡ ಅವರು ತಮ್ಮ ಹೋಟೆಲ್ ಕೆಲಸಕ್ಕೆ ರಜೆ ಹಾಕಿದ್ದರು ಎಂಬ ಮಾಹಿತಿಯೂ ಇದೆ. ಈ ಎಲ್ಲ ಸಾಂದರ್ಭಿಕ ಸಾಕ್ಷ್ಯಗಳನ್ನು ಸಮಗ್ರವಾಗಿ ವಿಶ್ಲೇಷಿಸಿ ಮರು ತನಿಖೆ ನಡೆಸಬೇಕು ಎಂದ ಅವರು, ಪ್ರಕರಣದ ಮರು ತನಿಖೆಗೆ ನ್ಯಾಯಾಲಯದಿಂದ ಸೂಕ್ತ ಸೂಚನೆ ಪಡೆದು, ಇತ್ತೀಚೆಗೆ ಬಂದಿರುವ ಎಲ್ಲ ಹೊಸ ಮಾಹಿತಿಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.