
ಯಕ್ಷಗಾನ ನಿಲ್ಲಿಸಿದ ಪೊಲೀಸರು: ವ್ಯಾಪಕ ಆಕ್ರೋಶ
Monday, September 1, 2025
ಮಂಗಳೂರು: ಬಂಟ್ವಾಳ ಪಾಣೆಮಂಗಳೂರು ಸಮೀಪದ ಸಜೀಪಮುನ್ನೂರು ಎಂಬಲ್ಲಿ ಗಣೇಶೋತ್ಸವದ ಅಂಗವಾಗಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನವನ್ನು ಪೊಲೀಸರು ಅರ್ಧದಲ್ಲಿಯೇ ನಿಲ್ಲಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಬಳಸುವಂತಿಲ್ಲ ಎಂಬ ನಿಯಮವನ್ನು ಮುಂದಿಟ್ಟು ಯಕ್ಷಗಾನ, ನಾಟಕ ಮತ್ತಿತರ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸುವ ಘಟನೆಗಳು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚೆಚ್ಚು ನಡೆಯುತ್ತಿದೆ. ಇದೀಗ ಜಿಲ್ಲೆಯ ಕೆಲವು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಅರ್ಧದಲ್ಲಿಯೇ ನಿಲ್ಲಿಸಿದ ಬಗ್ಗೆ ವರದಿಯಾಗಿವೆ.
ಗಣೇಶೋತ್ಸವದ ಅಂಗವಾಗಿ ಸಜೀಪಮುನ್ನೂರಿನಲ್ಲಿ ‘ವಿನಾಯಕ ಶಂಕರನಾರಾಯಣ ದುರ್ಗಾಂಬಾ ಯಕ್ಷಗಾನ ತಂಡ ನಂದಾವರ’ ಇವರಿಂದ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ರಾತ್ರಿ 10 ಗಂಟೆ ವೇಳೆಗೆ ಸ್ಥಳಕ್ಕೆ ಬಂದ ಪೊಲೀಸರು ಪ್ರದರ್ಶನವನ್ನು ಮೊಟಕುಗೊಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.