
ಸಮೀಕ್ಷೆಯಲ್ಲಿ ಮರಾಠಿಗರೆಲ್ಲ ಪಾಲ್ಗೊಳ್ಳಿ
ಮಂಗಳೂರು: ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸ್ವಾಗತಾರ್ಹ. ಸಮೀಕ್ಷೆಯಲ್ಲಿ ಮರಾಠಿಗರೆಲ್ಲ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ದ.ಕ. ಜಿಲ್ಲಾ ಸಮಿತಿ ಹೇಳಿದೆ.
ಇಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ. ಸುರೇಶ್ ರಾವ್ ಕರ್ ಮೋರೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ ಸಮಯದಲ್ಲಿ ನೀಡುವ ಪ್ರಶ್ನೆಯಲ್ಲಿ ಮರಾಠರು ತಮ್ಮ ಧರ್ಮವನ್ನು ‘ಹಿಂದು’ ಎಂದು ನಮೂದು ಮಾಡಬೇಕು, ಜಾತಿಯನ್ನು ‘ಮರಾಠ’, ಉಪ ಜಾತಿಯನ್ನು ‘ಕುಣಬಿ’ ಮತ್ತು ಮಾತೃಭಾಷೆಯನ್ನು ‘ಮರಾಠಿ’ ಎಂದು ನಮೂದಿಸುವಂತೆ ಮನವಿ ಮಾಡಿದರು.
ಕರಾವಳಿ ಭಾಗದಲ್ಲಿ ಸುಮಾರು 60,000 ಮಂದಿ ಮರಾಠರಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಮಂದಿ ಮರಾಠಿಗರಿದ್ದು, ರಾಜ್ಯ ಸರ್ಕಾರ ಈ ಹಿಂದೆ ಕೇವಲ 16 ಲಕ್ಷ ಎಂದು ನಮೂದಿಸಿತ್ತು. ಇದು ತಪ್ಪು ಮಾಹಿತಿಯಾಗಿದೆ. ಸಮ್ಮ ಸಮುದಾಯದ ಎಲ್ಲರೂ ಈ ಬಾರಿಯ ಸಮೀಕ್ಷೆಯಲ್ಲಿ ಭಾಗವಹಿಸಬೇಕು ಎಂದರು.
ಬೆಂಗಳೂರಿನ ಶಿವಾಜಿನಗರದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಆಗುತ್ತಿದ್ದು, ಇದಕ್ಕೆ ಛತ್ರಪತಿ ಶಿವಾಜಿ ಮಹಾರಾಜ ಹೆಸರಿಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಮುಖಂಡರು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡುತ್ತೇವೆ ಎಂದು ಅವರು ತಿಳಿಸಿದರು.
ಪ್ರಮುಖರಾದ ಚಂದ್ರಶೇಖರ್ ಚಂದ್ರಮಾನ್, ನಾಗೇಶ್ ಎನ್. ಪಾಟೀಲ್, ಗುರುರಾಜ್ ಎನ್. ಧರ್ಮರಾಜ್, ಭಾಗ್ಯಲಕ್ಷ್ಮಿ, ಸುಧಾಕರ ಸಿಂಧ್ಯಾ, ಸವಿತಾ ನಾಗೇಶ್ ಪಾಟೀಲ್, ಯಶಪಾಲ್ ಬಹುಮಾನ್, ಯಶವಂತ್ ಚಂದ್ರಮಾನ್ ಉಪಸ್ಥಿತರಿದ್ದರು.