ಅಕ್ರಮ ಜಾನುವಾರು ಸಾಗಾಟ; ಮೂವರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಪಿಕಪ್ ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದವರಾದ ಅಬ್ದುಲ್ ಕರೀಂ (38), ಅಬ್ದುಲ್ ಜಮೀರ್ (27) ಮತ್ತು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಪುತ್ತೂರು ಗಟ್ಟ ಮನೆಯ ಪೂವಪ್ಪ ಆರೋಪಿಗಳು.
ಖಚಿತ ಮಾಹಿತಿ ಆಧರಿಸಿ ಪುತ್ತೂರು ನಗರ ಠಾಣೆಯ ಪಿಎಸ್‌ಐ ಆಂಜನೇಯ ರೆಡ್ಡಿ ಜಿ.ವಿ. ನೇತೃತ್ವದ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ನಗರಸಭಾ ವ್ಯಾಪ್ತಿಯ ಪರ್ಲಡ್ಕ ಎಂಬಲ್ಲಿ ಪಿಕಪ್ ವಾಹನವನ್ನು ತಪಾಸಣೆಗೊಳಪಡಿಸಿದಾಗ ವಾಹನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಒಂದು ದನವನ್ನು ಸಾಗಾಟ ಮಾಡುತ್ತಿರುವುದು ಬಳಕಿಗೆ ಬಂದಿತ್ತು.
ತಿಂಗಳಾಡಿಯ ಗಟ್ಟ ಮನೆ ಎಂಬಲ್ಲಿರುವ ಪೂವಪ್ಪ ಎಂಬವರಿಂದ ರೂ.17 ಸಾವಿರಕ್ಕೆ ದನವನ್ನು ಖರೀದಿಸಿ. ಕೆದಿಲದ ಕಡೆಗೆ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ
ದನವನ್ನು ವಶಪಡಿಸಿಕೊಂಡಿರುವ ಪೊಲೀಸರು ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ. 82/2025ರಡಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರ ಕಲಂ 4, 5, 12 ಹಾಗೂ ಐಎಂವಿ ಕಾಯ್ದೆಯ ಕಲಂ 66 ಜೊತೆಗೆ 192(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.