ಜಿಎಸ್ಟಿ ದರ ಇಳಿಕೆ: ಬಿಜೆಪಿ ಸಂಭ್ರಮಾಚರಣೆ

ಜಿಎಸ್ಟಿ ದರ ಇಳಿಕೆ: ಬಿಜೆಪಿ ಸಂಭ್ರಮಾಚರಣೆ


ಮಂಗಳೂರು: ಕೇಂದ್ರ ಸರಕಾರದ ಜಿಎಸ್ಟಿ ದರ ಇಳಿಕೆ ನಿರ್ಧಾರ ಜಾರಿಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪಿವಿಎಸ್ ಬಳಿಯ ಬಿಜೆಪಿ ಜಿಲ್ಲಾ ಕಚೇರಿ ಮುಂಭಾಗದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಯಿತು.

ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಜಿಎಸ್ಟಿ ಇಳಿಕೆಯ ಸಂಭ್ರಮಾಚರಣೆನಡೆಸಿದರು. ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜೈಕಾರ ಕೂಗಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಿಎಸ್ಟಿ ದರ ಇಳಿಕೆ ಮಾಡಿರುವುದು ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಅನುಕೂಲವಾಗಲಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆ ಆಗಿದ್ದು, ಜನಸಾಮಾನ್ಯರಿಗೆ ಇದರ ಲಾಭ ದೊರೆಯಲಿದೆ. ದೇಶದ ಗಡಿ ರಕ್ಷಣೆಯ ಜತೆಗೆ ನಾಗರಿಕರ ಬದುಕಿಗೂ ಕೇಂದ್ರ ಸರಕಾರ ಅನುಕೂಲ ಮಾಡಿಕೊಟ್ಟಿದೆ. ದಸರಾ ಆರಂಭಕ್ಕೆ ಕೇಂದ್ರ ಸರಕಾರ ಒಳ್ಳೆಯ ಸುದ್ದಿ ನೀಡಿದೆ ಎಂದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ನವರಾತ್ರಿ ಹಬ್ಬದ ಉಡುಗೊರೆಯಾಗಿ ಕೇಂದ್ರ ಸರಕಾರ ಜಿಎಸ್ಟಿ ಕಡಿತ ಮಾಡಿದ್ದು, ದೇಶದ ಶೇ.೯೯ರಷ್ಟುಜನತೆಗೆ ಉಪಯುಕ್ತವಾಗಲಿದೆ. ಇದರಿಂದಾಗಿ ಕುಟುಂಬವೊಂದಕ್ಕೆ ತಿಂಗಳಿಗೆ ಎರಡು ಸಾವಿರ ರೂ. ಉಳಿತಾಯವಾಗಲಿದೆ. ಜಿಎಸ್ಟಿ ಇಳಿಕೆ ಬಗ್ಗೆ ಮುಂದಿನ ಒಂದು ವಾರಗಳ ಕಾಲ ಅಂಗಡಿ, ಮಾರುಕಟ್ಟೆಗಳಲ್ಲಿ ಉಳಿತಾಯ ಉತ್ಸವ ಆಚರಿಸಲಾಗುವುದು ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಜಿಎಸ್ಟಿ ಇಳಿಕೆಯಿಂದ ಜನರು ಸಂತೋಷಗೊಂಡಿದ್ದಾರೆ. ಈ ಬಗ್ಗೆ ಉದ್ದಿಮೆದಾರರು ಒಳಗೊಂಡ ತಂಡದಿಂದ ಜನರಿಗೆ ತಿಳುವಳಿಕೆ ನೀಡಲಾಗುವುದು ಎಂದು ಹೇಳಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಜಿಎಸ್ಟಿ ಸರಳೀಕರಣದಿಂದ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಜಿಎಸ್ಟಿ ಇಳಿಕೆ ನಿರ್ಧಾರವನ್ನು ಕಾಂಗ್ರೆಸ್ ಆಡಳಿತದ ರಾಜ್ಯಗಳು ವಿರೋಧಿಸಿದ್ದವು. ಆದರೆ, ಕೇಂದ್ರ ಸರಕಾರ ಬಡವರ ಪರವಾಗಿ ನಿಂತು ಜನತೆಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಜಿಎಸ್ಟಿ ಇಳಿಕೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನವರಾತ್ರಿ ಸಂದರ್ಭ ಬಡವರ ಮನೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ 10 ದಿನಗಳ ಕಾಲ ಜಿಎಸ್ಟಿ ಉತ್ಸವವನ್ನು ಅಭಿಯಾನದ ರೂಪದಲ್ಲಿ ನಡೆಸಲಾಗುವುದು. ಪಕ್ಷದ ಪ್ರಮುಖರಾದ ಜಯಂತ್ ಕೋಟ್ಯಾನ್, ಶಾಂತಾರಾಮ ಶೆಟ್ಟಿ, ಪ್ರಸನ್ನ ದರ್ಬೆ, ಅಕ್ಷಯ ಆಳ್ವ ಅವರ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ. ಜಿಎಸ್ಟಿ ಇಳಿಕೆಯ ಲಾಭವನ್ನು ಗ್ರಾಹಕರಿಗೆ ಒದಗಿಸುವಂತೆ ಮಾಡುವುದು ಅಭಿಯಾನದ ಉದ್ದೇಶ ಎಂದರು.

ಉಪಾಧ್ಯಕ್ಷೆ ಪೂಜಾ ಪೈ, ಕಾರ್ಯದರ್ಶಿ ಪೂರ್ಣಿಮಾ, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಮುಖಂಡರಾದ ನಿತಿನ್ ಕುಮಾರ್, ಭಾಸ್ಕರಚಂದ್ರ ಶೆಟ್ಟಿ, ಪ್ರಸನ್ನ ದರ್ಬೆ, ಜಗದೀಶ ಶೇಣವ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article