ಸಮೀಕ್ಷೆ ವಿಚಾರದಲ್ಲಿ ಕೆಲವರಿಂದ ಗೊಂದಲ ಸೃಷ್ಟಿ: ದಿನೇಶ್ ಗುಂಡೂರಾವ್

ಸಮೀಕ್ಷೆ ವಿಚಾರದಲ್ಲಿ ಕೆಲವರಿಂದ ಗೊಂದಲ ಸೃಷ್ಟಿ: ದಿನೇಶ್ ಗುಂಡೂರಾವ್


ಮಂಗಳೂರು: ಇದು ಜಾತಿ ಗಣತಿ ಅಲ್ಲ, ಜಾತಿ ಗಣತಿಯನ್ನು ಕೇಂದ್ರ ಸರ್ಕಾರವೇ ನಡೆಸುತ್ತದೆ. ರಾಜ್ಯ ಸರ್ಕಾರ ನಡೆಸುತ್ತಿರುವುದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಗಣತಿ. ಇದನ್ನು ವೈಜ್ಞಾನಿಕವಾಗಿಯೇ ನಡೆಸಲಾಗುತ್ತಿದೆ. ಹೀಗಾಗಿ ಜನತೆ ಅನಗತ್ಯ ಗೊಂದಲ ಪಡಬೇಕಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರಲ್ಲಿ ಭಾನುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸರ್ಕಾರ ಯಾರಿಗೆ ಅನುಕೂಲ ಮಾಡಬೇಕು? ನಿಜವಾದ ಹಿಂದುಳಿದವರು ಯಾರು? ಯಾರಿಗೆ ಹೆಚ್ಚಿನ ಸಹಾಯ ಮಾಡಬೇಕು? ಸವಲತ್ತು ಕೊಡಬೇಕಾದರೆ ಅದಕ್ಕೆ ಸಂಬಂಧಿಸಿದ ನಿರ್ದಿಷ್ಟ ಅಂಕಿಅಂಶಗಳನ್ನು ಸುಪ್ರೀಂ ಕೋರ್ಟ್ ಕೇಳುತ್ತದೆ. ಹಾಗಾಗಿ ಈ  ಸಮೀಕ್ಷೆ ನಡೆಸಲಾಗುತ್ತದೆ. ಆದರೆ ಇದಕ್ಕೆ ಕೆಲವರು ರಾಜಕೀಯ ಬೆರೆಸುತ್ತಿದ್ದಾರೆ. ವೀರಶೈವ, ಲಿಂಗಾಯತಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ಅದು ಅವರ ವೈಯಕ್ತಿಕ  ವಿಚಾರ. ಹಿಂದಿನಿಂದಲೂ ಅದು ಪ್ರತ್ಯೇಕ ಧರ್ಮ, ಪ್ರತ್ಯೇಕ ಧರ್ಮ ಅಲ್ಲ, ವೀರಶೈವ ಲಿಂಗಾಯತ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದರು.

ರಾಜ್ಯ ಸರ್ಕಾರ ನಡೆಸುತ್ತಿರುವ ಈ ಗಣತಿಯಲ್ಲಿ ಜಾತಿ ಹೆಸರಲ್ಲಿ ಏನೇನು ನಮೂದಿಸಬೇಕು ಎಂದು ಜಾತಿ ಮುಖಂಡರು ಹೇಳುತ್ತಿರುವುದು ಸರಿಯೇ ಇದೆ. ಈ ಮಧ್ಯೆ  ಗಣತಿ ಬಗ್ಗೆ ಗೊಂದಲ ಮೂಡಿಸಿ ಲಾಭ ಪಡೆಯಬೇಕು ಎಂದು ಹವಣಿಸುವ ತಂಡವೇ ಇದೆ ಎಂದರು. 

ಹಲವಾರು ತಜ್ಞರು ಸೇರಿಕೊಂಡು ಈ ಸಮೀಕ್ಷೆಯ ರೂಪುರೇಷೆ ಸಿದ್ಧಪಡಿಸಿದ್ದಾರೆ. ಪ್ರತಿಯೊಬ್ಬರ ಸಮಗ್ರ ಮಾಹಿತಿಯನ್ನು ಮನೆ ಮನೆ ಭೇಟಿ ನೀಡಿ ಪಡೆಯಲಾಗುತ್ತದೆ.  ಇಂತಹ ಕೆಲಸಗಳನ್ನು ಮಾಡುವಾಗ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಈ ಗಣತಿಯ ಹಿಂದೆ ಯಾವುದೇ ದುರುದ್ದೇಶ ಇಲ್ಲ, ಮುಖ್ಯಮಂತ್ರಿಗಳಿಗೆ ಜಾತಿ-ಜಾತಿಗಳನ್ನು  ಒಡೆಯಬೇಕು ಎಂಬ ಭಾವನೆ ಇಲ್ಲ. ಕಾಂಗ್ರೆಸ್ ಅಥವಾ ಸರ್ಕಾರಕ್ಕೆ ಯಾರನ್ನೂ ಒಡೆಯುವ ಪ್ರಶ್ನೆಯೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ಜಾತಿ ಗಣತಿ  ಮಾಡಲಾಗುವುದು ಎಂದ ಮೇಲೆ ಬಿಜೆಪಿಗೆ ಏನು ತಕರಾರು? ಬೇಕಾದರೆ ಅದನ್ನು ಬಿಜೆಪಿಗರು ವಿರೋಧಿಸಲಿ, ರಾಜ್ಯ ಸರ್ಕಾರದಿಂದ ಈ ಗಣತಿ ಆಗಲೇ ಬೇಕು, ಇದಕ್ಕೆ ನಮ್ಮ ಪೂರ್ಣ ಬೆಂಬಲ ಇದೆ ಎಂದರು.

ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಹಿಂದು ಕ್ರೈಸ್ತರು ಇದ್ದಾರೆ ಎಂದು ತಿಳಿಯಲಾಗಿದೆ. ಅದು ಹಾಗೆ ಇರಬಾರದು, ಮತಾಂತರಗೊಂಡರೆ,  ಅವರು ಆ ಧರ್ಮಕ್ಕೆ ಸೇರ್ಪಡೆಯಾದಂತೆ. ಹಿಂದು ಜಾತಿ, ಧರ್ಮ ಎಂದು ಪ್ರತ್ಯೇಕ ಹುಡುಕುವುದರಲ್ಲಿ ಅರ್ಥ ಇಲ್ಲ. ಈ ವಿಚಾರವನ್ನು ನಾನು ಕೂಡ ಹಿಂದುಳಿದ  ವರ್ಗಗಳ ಆಯೋಗದ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಆಯೋಗವೂ ಭರವಸೆ ನೀಡಿದೆ. ಹಾಗಾಗಿ ಇದೊಂದು ಗಂಭೀರ  ವಿಚಾರವೇ ಅಲ್ಲ, ಎಲ್ಲವನ್ನೂ ಸರ್ಕಾರವೇ ಸೃಷ್ಟಿ ಮಾಡುತ್ತಿದೆ ಎಂಬ ಅರ್ಥದಲ್ಲಿ ವಿಪಕ್ಷಗಳು ಆರೋಪಿಸುತ್ತಿವೆ ಎಂದರು. 

ಹಿಂದೆ ಬಿಜೆಪಿಯೇ ಒಪ್ಪಿಕೊಂಡಿತ್ತು:

ಹಿಂದು ಧರ್ಮದಲ್ಲಿ ಸುಮಾರು 47 ಹಿಂದು ಉಪ ಜಾತಿಗಳನ್ನು ಕ್ರೈಸ್ತ ಧರ್ಮದ ಜೊತೆ ಕಾಂಗ್ರೆಸ್ ಜೋಡಿಸಿಲ್ಲ. ಈ ಹಿಂದೆ ಹಿಂದುಳಿದ ವರ್ಗಗಳ ಆಯೋಗ ಮಾಡಿದ  ಪಟ್ಟಿಯನ್ನು ಬಿಜೆಪಿಯೇ ಒಪ್ಪಿಕೊಂಡಿತ್ತು. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕಾಂತರಾಜು ಸಮಿತಿ ವರದಿಯನ್ನು ಜಯಪ್ರಕಾಶ್ ಹೆಗ್ಡೆಗೆ ವಹಿಸಿದ್ದು ಬಿಜೆಪಿಯವರೇ.  ನಂತರವೇ ಆಯೋಗ ಅಧ್ಯಕ್ಷ ಜಯಪ್ರಕಾಶ್ ಅವರು ವರದಿ ನೀಡಿದ್ದಾರೆ. ಅದರ ಆಧಾರದ ಮೇಲೆ ಮೀಸಲಾತಿಯನ್ನು ಬಿಜೆಪಿ ಸರ್ಕಾರವೇ ಜಾರಿಗೊಳಿಸಿತ್ತು. ಆಗ  ವಿರೋಧಿಸದವರು ಈಗ ವಿರೋಧಿಸುತ್ತಿರುವುದು ಯಾಕೆ? ನಾವು ಕೂಡ ಸಮೀಕ್ಷೆಯಲ್ಲಿ ಯಾವುದೇ ಗೊಂದಲ ಇರಬಾರದು ಎಂದು ಹೇಳಿದ್ದೇವೆ. ಆಯೋಗ ಕೂಡ ಸಮೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಿದೆ. ಈ ಸಮೀಕ್ಷೆಯಿಂತ ಏನೂ ಸಮಸ್ಯೆ ಆಗುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿಢೀರ್ ದೆಹಲಿ ಭೇಟಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಆಗಾಗ ದೆಹಲಿಗೆ ಹೋಗುತ್ತಿರುತ್ತಾರೆ. ವಾರದಲ್ಲಿ ಮೂರ್ನಾಲ್ಕು ಸಲ ದೆಹಲಿಗೆ ಹೋಗುತ್ತಾರೆ. ಅದರಲ್ಲಿ ವಿಶೇಷ ಏನೂ ಇಲ್ಲ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article