ಪ್ರತಿಷ್ಠಿತ ಆಸ್ಪತ್ರೆಗಳ ಪ್ರಾದೇಶಿಕ ಕೇಂದ್ರ ಮಂಗಳೂರಿನಲ್ಲಿ ಸ್ಥಾಪನೆ
ಮಂಗಳೂರು: ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳು ದ.ಕ ಜಿಲ್ಲೆ ಆರೋಗ್ಯ ಕ್ಷೇತ್ರದಲ್ಲಿ ನಂಬಿಕೆಯ ಸಾಧನೆ ಮಾಡಿದ್ದು, ಭವಿಷತ್ತಿನ ಗುಣಮಟ್ಟದ ಆರೋಗ್ಯ ಸೇವೆಗಳ ನೀಡುವ ಉದ್ದೇಶದಿಂದ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಾದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯ ಆಸ್ಪತ್ರೆ, ನಿಮಾನ್ಸ್ ಮಾನಸಿಕ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರವನ್ನು ವೆನ್ಲಾಕ್‌ನಲ್ಲಿ ಸ್ಥಾಪನೆಗೆ ಮಹತ್ತರ ಯೋಜನೆ ರೂಪಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ವೆನ್ಲಾಕ್, ಲೇಡಿಗೋಷನ್ ಮತ್ತು ಕೆ.ಎಂ.ಸಿ ಆಸ್ಪತ್ರೆಗಳ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ ಹಾಗೂ ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳ 175ನೇ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ ಪ್ರಮುಖ ಆಸ್ಪತ್ರೆಗಳ ಉಪಕೇಂದ್ರ ಆರಂಭಗೊಂಡರೆ ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳ ಒತ್ತಡ ಕಡಿಮೆಯಾಗಲಿದೆ. ಈನಿಟ್ಟಿನಲ್ಲಿ ವಾಮಂಜೂರು ಸುತ್ತಮುತ್ತ ಲಭ್ಯ ನಿವೇಷನದಲ್ಲಿ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಇಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವುದರಿಂದಲೇ ರಾಜ್ಯದ ಮೂಲೆ ಮೂಲೆಯಿಂದಲೂ ಚಿಕಿತ್ಸೆಗಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಗುಣಮಟ್ಟದ ಸೇವೆಯೇ ನಮಗೆ ಹೆಮ್ಮೆ ಎಂದರು.
ಕಾರ್ಯಕ್ರಮದ ಉದ್ಘಾಟಿಸಿ ಜಿಲ್ಲಾ ಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳ 175ನೇ ಸಂಭ್ರಮಾಚರಣೆ ಎಂದರೆ ಇಡೀ ದೇಶ ಸಂಭ್ರಮಿಸುವಂತದ್ದು. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ದಾವನಗೆರೆ ಸೇರಿದಂತೆ ಹಲವೆಡೆ ಆಸ್ಪತ್ರೆಗಳಿದ್ದರೂ ಸುಧೀರ್ಘ ಅವಧಿಯಲ್ಲಿ ಸಮಾಜದ ಸಾವಿರಾರು ಜನರಿಗೆ ಗುಣಮಟ್ಟದ ಅರೋಗ್ಯ ಸೇವೆ ನೀಡಿರುವುದು ಇಲ್ಲಿನ ವಿಶೇಷತೆ ಎಂದರು.
ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ದರ್ಶನ್ ಎಚ್‌ವಿ, ಮಾಜಿ ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ ಹಾಗೂ ಬಿ. ಜನಾರ್ಧನ ಪೂಜಾರಿ, ಮಣಿಪಾಲ ವಿವಿ ಪೊ. ಚಾನ್ಸಲರ್ ಡಾ. ಎಚ್. ಎಸ್. ಬಲ್ಲಾಳ್, ಸಂಸದ ಕ್ಯಾ.ಬೃಜೇಶ್ ಚೌಟ, ಸುಳ್ಯ ಶಾಸಕಿ ಭಗೀರಥಿ ಮುರುಳ್ಯ, ಡಿಎಚ್‌ಒ ಡಾ. ತಿಮ್ಮಯ್ಯ, ಎಂಎಲ್‌ಸಿ ಐವನ್ ಡಿಸೋಜಾ, ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ಅಭಯಚಂದ್ರ ಜೈನ್, ಪ್ರಮುಖರಾದ ಡಾ. ಕೆ. ಆರ್. ಕಾಮತ್, ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ಡಾ.ದುರ್ಗಾಪ್ರಸಾದ್ ಸೇರಿದಂತೆ ಹಲವರಿದ್ದರು.
175ನೇ ವರ್ಷಾಚರಣಾ ಸಮಿತಿ ಅಧ್ಯಕ್ಷ ಡಾ. ಎಂ. ಶಾಂತರಾಮ ಶೆಟ್ಟಿಸ್ವಾಗತಿಸಿದರು. ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ಡಿಎಸ್ ಪ್ರಸ್ತಾವಿಸಿದರು.
175 ವರ್ಷ ಸುದೀರ್ಗ ಆರೋಗ್ಯ ಸೇವೆ ನೀಡಿದ್ದು, ರಾಜ್ಯದಲ್ಲೇ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವೆನ್ಲಾಕ್‌ನ್ನು ರಾಜ್ಯದ ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆ ಸಿದ್ದಗೊಂಡಿದೆ. ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತಲೂ ಹೆಚ್ಚಿನ ಗುಣಮಟ್ಟದ ಆರೋಗ್ಯ ಸೇವೆ ವೆನ್ಲಾಕ್ ನೀಡಲಿದೆ. -ದಿನೇಶ್ ಗುಂಡೂರಾವ್. ಜಿಲ್ಲಾ ಸ್ತುವಾರಿ ಸಚಿವರು