‘ಮಂಗಳೂರು ದಸರಾ ರಾಜ್ಯ ಮಟ್ಟದ ಕ್ರೀಡೋತ್ಸವ’ಕ್ಕೆ ಚಾಲನೆ
ಮಂಗಳೂರು: ನಗರದ ಕುದ್ರೋಳಿ ಕ್ಷೇತ್ರದ ಮಂಗಳೂರು ದಸರಾ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕು ಬಿಲ್ಲವ ಸಂಘದ ವತಿಯಿಂದ ನಗರದ ಮಂಗಳಾ ಕ್ರೀಡಾಂಗಣದಲ್ಲಿ ‘ಮಂಗಳೂರು ದಸರಾ ರಾಜ್ಯ ಮಟ್ಟದ ಕ್ರೀಡೋತ್ಸವ’ ಭಾನುವಾರ ನೆರವೇರಿತು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದಸರಾ ನಾಡಹಬ್ಬವಾಗಿದ್ದು, ಸರ್ವರೂ ಸಂಭ್ರಮಿಸುತ್ತಾರೆ. ಆ ಸಂತೋಷದ ನೆಲೆಯಲ್ಲಿ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಜತೆಯಾಗಿ ಕ್ರೀಡೆಯ ಮೂಲಕ ಸಮ್ಮಿಲನವಾಗುತ್ತಿರುವುದು ಅಭಿನಂದನೀಯ. ಎಲ್ಲಾ ವಯೋಮಾನದ ಕ್ರೀಡಾಪಟುಗಳಿಗೆ ದಸರಾ ಕ್ರೀಡಾಕೂಟ ಉತ್ತಮ ಅವಕಾಶ. ಮುಂದಿನ ವರ್ಷದಲ್ಲಿ ಈ ಕ್ರೀಡೋತ್ಸವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಅನುದಾನವನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ರಾಜ್ಯ ಹಿಂದುಳಿದ ವರ್ಗದ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಮಾತನಾಡಿ, ಮಹಿಳಾ ಶಕ್ತಿಯ ಆರಾಧನೆಯಾಗಿರುವ ನವರಾತ್ರಿ ಸರ್ವರ ಮನೆ ಮನಗಳಲ್ಲಿ ಸ ನ್ಮಂಗಲವನ್ನು ನೀಡಲಿ ಎಂದು ಶುಭಹಾರೈಸಿದರು.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಕ್ರೀಡಾ ಜ್ಯೋತಿ ಬೆಳಗಿದರು. ಪಥಸಂಚಲನ ಸ್ಪರ್ಧೆಯಲ್ಲಿ ಆಳ್ವಾಸ್ ಮೂಡಬಿದ್ರೆ ಪ್ರಥಮ ಸ್ಥಾನ, ಶ್ರೀ ರವಿಶಂಕರ ಗುರೂಜಿ ಶಿಕ್ಷಣ ಸಂಸ್ಥೆ ಕೊಂಚಾಡಿ ದ್ವಿತೀಯ ಸ್ಥಾನ, ಮಂಗಳಾ ಮಾಸ್ಟರ್ಸ್ ಅತ್ಲೆಟಿಕ್ಸ್ ಫ಼್ರೆಂಡ್ಸ್ ಹಾಗೂ ಎಂಡ್ಯುರೆನ್ಸ್ ಅಕಾಡೆಮಿ ಮಂಗಳೂರು ತಂಡ ತೃತೀಯ ಬಹುಮಾನ ಪಡೆಯಿತು. ಬಳಿಕ ಅಥ್ಲೆಟಿಕ್ಸ್ ನಲ್ಲಿ ಬಾಲಕ-ಬಾಲಕಿಯರ, ಪುರುಷರ ಹಾಗೂ ಮಹಿಳೆಯವರ ಒಟ್ಟು 7 ವಯೋಮಿತಿ ವಿಭಾಗಗಳ (12, 14, 17, 23, 40, 50 ಹಾಗೂ 50 ವರ್ಷ ಮೇಲ್ಪಟ್ಟ) 74 ಕ್ರೀಡಾ ಸ್ಪರ್ಧೆಗಳು ನಡೆಯಿತು. ಪ್ರೌಢ ಶಾಲಾ ವಿಭಾಗದ ವಾಲಿ ಬಾಲ್ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟ ನಡೆಯಿತು.
ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ದ.ಕ ಜಿಲ್ಲಾ ಅತ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಎ. ತಾರನಾಥ ಶೆಟ್ಟಿ, ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ, ಮನಪಾ ನಿಕಟಪೂರ್ವ ಸದಸ್ಯರಾದ ಅನಿಲ್ ಕುಮಾರ್, ಎ.ಸಿ. ವಿನಯರಾಜ್, ಶ್ರೀ ಸಾಯಿ ಶಕ್ತಿ ಸೌಹಾರ್ದ ಕೋ. ಸೊಸೈಟಿ ಅಧ್ಯಕ್ಷರಾದ ಜ್ಯೋತಿಚಂದ್ರ, ಮಂಗಳೂರು ತಾಲೂಕು ಬಿಲ್ಲವರ ಸಂಘದ ಉಪಾಧ್ಯಕ್ಷ ಸುರೇಶ್ ಚಂದ್ರ ಕೋಟ್ಯಾನ್ ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಬಿಲ್ಲವರ ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಪೂಜಾರಿ ವಂದಿಸಿದರು. ಪ್ರಜ್ಞಾ ಒಡಿಲ್ನಾಳ ಹಾಗೂ ಮೋಹನ್ ಶಿರ್ಲಾಲು ನಿರೂಪಿಸಿದರು.