‘ಸ್ವಯಂ ಸೇವಾ ಕ್ಷೇತ್ರ ವಲಯ’ವನ್ನು ಕೈಬಿಟ್ಟು ಅನ್ಯಾಯ
ಮಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ‘ಸ್ವಯಂ ಸೇವಾ ಕ್ಷೇತ್ರ ವಲಯ’ವನ್ನು ಕೈಬಿಟ್ಟು ಅನ್ಯಾಯವೆಸಗಲಾಗಿದೆ ಎಂದು ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (-ವಾರ್ಡ್ ಕೆ) ಆರೋಪಿಸಿದೆ.
ಸ್ವಯಂ ಸೇವಾ ಸಂಸ್ಥೆಗಳ ಇರುವಿಕೆಯನ್ನು ಸಮೀಕ್ಷೆಯಲ್ಲಿ ದಾಖಲು ಮಾಡಬೇಕಿದೆ. ಸ್ವಯಂ ಸೇವಾ-ಸಂಸ್ಥೆಗಳ ಮುಖ್ಯಸ್ಥರು ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಮಾರ್ಗದರ್ಶನ ನೀಡಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.
ಸ್ವಯಂ ಸೇವಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಸಂಸ್ಥಾಪಕರು, ಸಿಬ್ಬಂದಿ, ಗೌರವಧನ ಧನ ಪಡೆಯುತ್ತಿರುವವರು, ಬೆಂಬಲ ಸಂಸ್ಥೆಗಳು, ದಾನಿಗಳು, ಸೇವಾದಾರರು ಈ ಬಗ್ಗೆ ಗಮನ ಹರಿಸಿ, ಸಮೀಕ್ಷೆಯ ಕುಟುಂಬದ ಮಾಹಿತಿ ನಮೂನೆ ಅನುಬಂಧ-1 ಕುಟುಂಬದ ಮಾಹಿತಿಯಲ್ಲಿ ಉದ್ಯೋಗ ಕಾಲಂ 28ರಲ್ಲಿ ಸ್ವಯಂ ಸೇವಾ ಸಂಸ್ಥೆಯ ಉದ್ಯೋಗಿಯೆಂದು ನಮೂದಿಸಬೇಕು. ಅನುಬಂಧ -2, ಕುಟುಂಬದ ಅನುಸೂಚಿ ಕಾಲಂ 27 ರಲ್ಲಿ ಉದ್ಯೋಗದ ೨ನೇ ಸಾಲಿನಲ್ಲಿ ಸ್ವಯಂ ಸೇವಾಕ್ಷೇತ್ರ ಎಂದು ದಾಖಲು ಮಾಡಬೇಕು. ಕಾಲಂ 27ಸಿಯಲ್ಲಿ ಮಾಸಿಕ ವೇತನದ ಆಧಾರದ ಮೇಲೆ ಉದ್ಯೋಗದಲ್ಲಿರುವ ಉದ್ಯೋಗಿಗಳಲ್ಲಿ ೧೧ವಲಯಗಳನ್ನು ಗುರುತಿಸಿದ್ದು ಸ್ವಯಂ ಸೇವಾಕ್ಷೇತ್ರವನ್ನು ಕೈಬಿಡಲಾಗಿದೆ. ಆದರೂ, ಕ್ರಮಸಂಖ್ಯೆ 12ರಲ್ಲಿ ಇತರೆ ಎಂಬ ಕಲಂನಲ್ಲಿ ಸ್ವಯಂ ಸೇವಾಕ್ಷೇತ್ರ ವಲಯ ಎಂದು ದಾಖಲಿಸಿ ಆಡಳಿತ ವರ್ಗ, ತಾಂತ್ರಿಕ ವರ್ಗ, ಸಿಬ್ಬಂದಿ ವರ್ಗ ಎಂಬಲ್ಲಿ ಉದ್ಯೋಗದ ಮಾಹಿತಿ ದಾಖಲಿಸಬೇಕು ಎಂದು -ವಾರ್ಡ್ ಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ ಎ. ವಿನಂತಿಸಿದ್ದಾರೆ.