
ಪ್ರಯಾಣಿಕರ ಚಿನ್ನಾಭರಣ ಕಳವು: ವಿಮಾನ ನಿಲ್ದಾಣದ ಲಗೇಶ್ ನೌಕರರು ಸೆರೆ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು ಬೆಲೆಬಾಳುವ ಚಿನ್ನಾಭರಣ ಕಳವುಗೈದಿರುವ ಆರೋಪದಲ್ಲಿ ನಾಲ್ಕು ಮಂದಿಯನ್ನು ಬಜ್ಪೆ ಪೊಲೀಸರು ಇಬ್ಬರನ್ನು ಬಂಧಿಸಿ, ಮತ್ತಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಹಾಗೂ ವಶಕ್ಕೆ ಪಡೆದುಕೊಂಡವರೆಲ್ಲರೂ ವಿಮಾನ ನಿಲ್ದಾಣದಲ್ಲಿ ಲೆಗೇಜ್ ಲೋಡ್ - ಅನ್ ಲೋಡ್ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ.
ಸಿಆರ್‌ಪಿಎಫ್ ಜವಾನ ಹರಿಕೇಶ್ ಎಂಬವರ ಪತ್ನಿ ರಾಜೇಶ್ವರಿ ಪದ್ಮಶಾಲಿ ಅವರು ಸಂಬಂಧಿಕರ ಮದುವೆಗಾಗಿ ಶನಿವಾರ ಬೆಳಗ್ಗೆ 8.45ರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬೆಂಗಳೂರಿನಿಂದ ಹೊರಟು ಅದೇ ದಿನ ಬೆಳಗ್ಗೆ 9.0ಕ್ಕೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.
ವಿಮಾನ ನಿಲ್ದಾಣದ ಹೊರಗೆ ಬಂದು ತನ್ನ ಲಾಗೇಜ್ ಟ್ರಾಲಿ ಬ್ಯಾಗ್ ನ ಲಾಕ್ ತೆರದಿತ್ತು. ತಕ್ಷಣ ಬ್ಯಾಗ್ ಪರಿಶೀಲಿಸಿದಾಗ 56 ಗ್ರಾಂ ತೂಕದ ಸುಮಾರು 4.5 ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲೆಸ್ ಕಳವಾಗಿರುವುದು ಗೊತ್ತಾಗಿದೆ.
ಈ ಸಂಬಂಧ ಅವರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಂಗಳೂರು ವಿಮಾನ ನಿಲ್ದಾಣದಲ್ಲಿನ ಲೋಡ್ - ಅನ್ ಲೋಡ್ ಮಾಡುವ ಕೆಲಸ ಮಾಡುತ್ತಿದ್ದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವಿದೇಶಗಳಿಂದ ಬರುವ ಹಲವರ ಲಗೇಜ್ ಬ್ಯಾಗ್ ಗಳನ್ನು ಅಕ್ರಮವಾಗಿ ತೆರೆದು ಅದರಲ್ಲಿದ್ದ ಚಿನ್ನಾಭರಣ, ಮೊಬೈಲ್ ಫೋನ್ ಸೇರಿ ಬೆಲೆಬಾಳುವ ವಸ್ತುಗಳ ಕಳವು ನಡೆದಿತ್ತು. ಈ ಬಗ್ಗೆ ಪ್ರಯಾಣಿಕರು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇನ್ನೂ ಕೆಲವರು ಪೊಲೀಸರಿಗೆ ದೂರು ನೀಡುತ್ತಿದ್ದರು.
ಸದ್ಯ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಬ್ಯಾಗ್ ಗಳಿಂದ ಕಳವು ಮಾಡುವ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.