ಧರ್ಮಸ್ಥಳ ಪ್ರಕರಣ: ಮಟ್ಟಣ್ಣನವರ್, ಜಯಂತ್ ವಿಚಾರಣೆ

ಧರ್ಮಸ್ಥಳ ಪ್ರಕರಣ: ಮಟ್ಟಣ್ಣನವರ್, ಜಯಂತ್ ವಿಚಾರಣೆ

ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ.ಯನ್ನು ವಿಚಾರಣೆ ನಡೆಸಿದೆ.

ಮೊದಲ ಹಂತದ ವಿಚಾರಣೆ ಪೂರ್ಣ..

ವಿಚಾರಣೆಗೊಳಗಾಗಿದ್ದ ಯುಟ್ಯೂಬರ್‌ಗಳಾದ ಅಭಿಷೇಕ್ ಹಾಗೂ ಮನಾಫ್ ಅವರ ವಿಚಾರಣೆಯನ್ನು ಹಾಗೂ ಹೇಳಿಕೆ ದಾಖಲಿಸುವ ಕಾರ್ಯವನ್ನು ಎಸ್‌ಐಟಿ ಪೂರ್ಣಗೊಳಿಸಿದೆ.

ಯುಟ್ಯೂಬರ್ ಅಭಿಷೇಕ್ ಅವರನ್ನು ಕಳೆದ ಒಂದು ವಾರದಿಂದ ಎಸ್.ಐ.ಟಿ ತಂಡ ವಿಚಾರಣೆ ನಡೆಸಿತ್ತು. ಇವರಿಂದ ಮೊಬೈಲನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಬಂಗ್ಲೆ ಗುಡ್ಡದಿಂದ ತಲೆ ಬುರುಡೆ ತೆಗೆಯುವ ವಿಡಿಯೋವನ್ನು ಇವರು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಈತನ ವಿಚಾರಣೆ ನಡೆಸಿ ಹೇಳಿಕೆ ಪಡೆಯುವ ಕಾರ್ಯ ಪೂರ್ಣಗೊಂಡಿದೆ.

ತಾತ್ಕಾಲಿಕ ರಿಲೀಫ್..

ಇಂದಿನ ಎಸ್‌ಐಟಿ ವಿಚಾರಣೆಗೆ ಸೌಜನ್ಯ ಮಾವ ವಿಠಲ ಗೌಡ ಹಾಗೂ ಅವರ ಸಹಚರ ಪ್ರದೀಪ್ ಗೌಡ ಹಾಜರಾಗಿಲ್ಲ, ಅವರಿಗೆ ಎಸ್‌ಐಟಿ ತಾತ್ಕಾಲಿಕ ರಿಲೀಫ್ ನೀಡಿದೆ. ವಿಠಲ ಗೌಡ ಐದು ದಿನ ಹಾಗೂ ಪ್ರದೀಪ್ ಗೌಡರನ್ನು ನಾಲ್ಕು ದಿನಗಳ ಕಾಲ ಎಸ್‌ಐಟಿ ವಿಚಾರಣೆ ನಡೆಸಿತ್ತು. ಮುಂದಿನ ದಿನಗಳಲ್ಲಿ ನೋಟಿಸ್ ನೀಡಿದರೆ ವಿಚಾರಣೆಗೆ ಹಾಜರಾಗುವಂತೆ ಹೇಳಿಕೆ ದಾಖಲಿಸಿ ಬುಧವಾರ ಇವರನ್ನು ಕಳುಹಿಸಲಾಗಿತ್ತು.

ವಿಳಂಬ ತನಿಖೆ..

ಬುರುಡೆ ಪ್ರಕರಣದ ಆರೋಪಿ ಚೆನ್ನಯ್ಯನ ನ್ಯಾಯಾಂಗ ಬಂಧನದ ಬಳಿಕ ಎಸ್‌ಐಟಿ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಕೇವಲ ನೋಟೀಸ್ ಹಾಗೂ ವಿಚಾರಣೆಗೆ ಮಾತ್ರ ಎಸ್‌ಐಟಿ ತನಿಖೆ ಸೀಮಿತವಾಗಿದೆ. ಒಟ್ಟು ಷಡ್ಯಂತ್ರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವುದನ್ನು ಸಾಕ್ಷಿ ಸಹಿತ ಎಸ್‌ಐಟಿ ಪತ್ತೆಹಚ್ಚಿದರೂ ಆರೋಪಿಗಳ ಬಂಧನಕ್ಕೆ ಮೀನಾಮೇಷ

ಯಾಕೆ ಎಂಬ ಪ್ರಶ್ನೆ ಮೂಡಿದೆ.  ಆರೋಪಕ್ಕೆ ಒಳಗಾದವರ ಬಂಧನ ಪ್ರಕ್ರಿಯೆ ಆರಂಭಿಸಲು ಎಸ್‌ಐಟಿ ಮುಖ್ಯಸ್ಥರ ಸೂಚನೆಗೆ ಅಧಿಕಾರಿಗಳು ಕಾಯುತ್ತಿದ್ದಾರೆ ಎನ್ನಲಾಗಿದೆ. 

ಎಫ್‌ಎಸ್‌ಎಲ್ ವರದಿ..

ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್) ವರದಿಮಮುಂದಿನ ವಾರ ಕೋರ್ಟ್‌ಗೆ ಸಲ್ಲಿಕೆಯಾಗುವ ಸಾಧ್ಯತೆ ಹೇಳಲಾಗಿದೆ.

ಎನ್‌ಐಎ..

ತನಿಖೆಯನ್ನು ಎನ್‌ಐಎಗೆ ವಹಿಸಲಾಗುವ ಸಾಧ್ಯತೆ ಇರುವುದರಿಂದಲೇ ವಿಚಾರಣೆ ನಿಧಾನಗೊಂಡಿದೆ ಎಂದು ಹೇಳಲಾಗುತ್ತಿದೆ.  ಈ ಮಧ್ಯೆ ಸ್ವಾಮೀಜಿಗಳ ನಿಯೋಗ ಮತ್ತು ಬಿಜೆಪಿ ನಿಯೋಗ ಪ್ರತ್ಯೇಕವಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸುವಂತೆ ಆಗ್ರಹಿಸಿತ್ತು. ಕೆಲವೇ ದಿನಗಳಲ್ಲಿ ಈ ಕುರಿತು ಒಂದು ತೀರ್ಮಾನವಾಗುವ ನಿರೀಕ್ಷೆ ಹೊಂದಲಾಗಿದೆ.

ದೂರು..

ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಗುರಿಯಾಗಿಸಿ ಕ್ರಿಮಿನಲ್ ಸಂಚು ರೂಪಿಸುತ್ತಿರುವ ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಧರ್ಮಸ್ಥಳ ಗ್ರಾಮದ ಸುರೇಂದ್ರ ಪ್ರಭು ಎಂಬವರು ಬೆಳ್ತಂಗಡಿ ಎಸ್‌ಐಟಿ ಠಾಣೆಗೆ ದೂರು ನೀಡಿದ್ದಾರೆ.

ಶಿಕ್ಷೆಗೆ ಸಿದ್ಧ..

ಕಾನೂನು ಅರಿವಿಲ್ಲದೇ ತಪ್ಪು ಮಾಡಿದರೆ ಅದಕ್ಕೆ ತಕ್ಕುದಾದ ಶಿಕ್ಷೆ ಪಡೆಯಲೇ ಬೇಕು ಎಂದು ಹೋರಾಟಗಾರ ಜಯಂತ್ ಟಿ. ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದರೂ ಶಿಕ್ಷೆ ಅನುಭವಿಸಬೇಕು. ನಾನು ತನಿಖೆ ಮುಗಿಸಿ ಹೊರಗೆ ಬರುವಾಗ ಜನ ಹೊಡೆದಿದ್ದಾರಾ ಎಂದು ಹೇಳುತ್ತಿದ್ದಾರೆ. ಆದರೆ ಎಸ್‌ಐಟಿ ಅಧಿಕಾರಿಗಳು ನಿಯಮ ಪ್ರಕಾರ ತನಿಖೆ ನಡೆಸುತ್ತಿದ್ದಾರೆ. ನನಗೆ ಎಸ್‌ಐಟಿ ಯವರು ಹೊಡೆದಿಲ್ಲ. ದಾಖಲೆ ಇರಿಸಿಕೊಂಡು ಅವರು ತನಿಖೆ ನಡೆಸುತ್ತಿದ್ದಾರೆ. ಎಸ್‌ಐಟಿಯವರ

ಮುಂದೆ ಯಾವುದೇ ಸುಳ್ಳು ಹೇಳುವುದಕ್ಕೆ ಆಗುವುದಿಲ್ಲ. ಯಾರು ತನಿಖೆ ನಡೆಸಿದರೂ ಸತ್ಯವನ್ನೇ ಹೇಳಿ. ನನ್ನ ಮೂರು ಮೊಬೈಲ್ ಎಸ್‌ಐಟಿ ಯವರಿಗೆ ಒಪ್ಪಿಸಿದ್ದೇನೆ. ಎಫ್‌ಎಸ್‌ಎಲ್‌ಗೆ ಅದನ್ನು ಕಳುಹಿಸಿಕೊಟ್ಟಿದ್ದಾರೆ. ಅದರಲ್ಲಿ ಈ ಪ್ರಕರಣ ಸಂಬಂಧಿಸಿ ಏನಾದರೂ ಇದ್ದರೆ ಅದನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ ಎಂದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article