ಅಭಿವೃದ್ಧಿಯಲ್ಲಿ ಪೌರ ಕಾರ್ಮಿಕರ ಕೊಡುಗೆ ಅದ್ವಿತೀಯ: ರವಿಚಂದ್ರ ಎನ್.
ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳೂರು ಪುರಭವನದಲ್ಲಿ ಮಂಗಳವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರಿಂದ ಮಹಾನಗರ ಪಾಲಿಕೆಗೆ ಗೌರವ ದೊರಕಿದೆ. ದೈನಂದಿನ ಜಂಜಾಟದಿಂದ ದೂರವಿದ್ದು ಸಂಭ್ರಮಿಸುವ ಉದ್ದೇಶದಿಂದ ಪೌರ ಕಾರ್ಮಿಕ ದಿನಾಚರಣೆಯನ್ನು ಸರಕಾರ ನಡೆಸಲು ಸೂಚಿಸಿದೆ ಎಂದವರು ಹೇಳಿದರು.
ಪಾಲಿಕೆ ಸಮುದಾಯ ಸಂಘಟನಾಧಿಕಾರಿ ಮಾಲಿನಿ ರೋಡ್ರಿಗಸ್ ಅವರು ಮಾತನಾಡಿ ನಗರದ ಸ್ವಚ್ಚತೆಯ ಜತೆಗೆ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಪಾಲಿಕೆ ವತಿಯಿಂದ ವಿಮೆ ಮಾಡಲಾಗಿದೆ. ಕಾರ್ಮಿಕರು ಇದರ ಬಗ್ಗೆ ತಿಳಿದುಕೊಳ್ಳಬೇಕು. ಕೆಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಅಧಿಕಾರಿಗಳಿಗೆ ತಿಳಿಸುತ್ತಿದ್ದಾರೆ ಎಂದು ಹೇಳಿದ ಅವರು ಈ ವರ್ಷ ಆರೋಗ್ಯ ನಿಧಿಯನ್ನು 5 ಲಕ್ಷಕ್ಕೆ ಏರಿಸಲಾಗಿದೆ ಹಾಗೂ ಸೌಲಭ್ಯ ಪಡೆಯಲು ಕಾರ್ಮಿಕರು ಹಿಂಜರಿಯಬಾರದು ಎಂದರು.
ಪಾಲಿಕೆ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ವಲಯ ಆಯುಕ್ತರಾದ ವಾಣಿ ಆಳ್ವ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದೀಪ್ತಿ ಎನ್., ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಎಸ್.ಪಿ.ಆನಂದ್ ಮುಂತಾದವರು ಉಪಸ್ಥಿತರಿದ್ದರು.
ಹಿರಿಯ ಹಾಗೂ ಸಾಧಕ ಪೌರಕಾರ್ಮಿಕರನ್ನು ಸಮ್ಮಾನಿಸಲಾಯಿತು. ಈ ಸಂದರ್ಭ ಎಲ್ಲಾ ಪೌರ ಕಾರ್ಮಿಕರಿಗೆ ಸಿಹಿತಿನಿಸುಗಳ ಪ್ಯಾಕೆಟ್ ಹಾಗೂ ವಿಶೇಷ ಕ್ಯಾಪ್ ನೀಡಲಾಯಿತು.