ಸೌಜನ್ಯ ಹೋರಾಟಗಾರ ತಿಮರೋಡಿ ಗಡಿಪಾರು
Tuesday, September 23, 2025
ಮಂಗಳೂರು: ಸೌಜನ್ಯ ಪರ ನ್ಯಾಯ ಹೋರಾಟಗಾರ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಮಾರು 32 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ಸಲ್ಲಿಸಿದ ಕೋರಿಕೆಯನ್ನು ಮನ್ನಿಸಿ ಪುತ್ತೂರು ಎಸಿ ಅವರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಪುತ್ತೂರು ಸಹಾಯಕ ಆಯುಕ್ತ (ಎಸಿ) ಸ್ಟೆಲ್ಲಾ ವರ್ಗಿಸ್ ಅವರಿಗೆ ಬೆಳ್ತಂಗಡಿ ಪೊಲೀಸರು ಪ್ರಕರಣದ ಬಗ್ಗೆ ವರದಿ ನೀಡಿದ್ದನ್ನು ಪರಿಶೀಲನೆ ನಡೆಸಿ ವರದಿಯ ಆಧಾರದಲ್ಲಿ ಸೆ.೧೮ರಂದು ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಗಡಿಪಾರು ಮಾಡಿದ ಆದೇಶದ ಪ್ರತಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿಗೆ ಬಂದ ಬಳಿಕ ಗಡಿಪಾರು ಮಾಡುವ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಪೊಲೀಸರು ಅಥವಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿದಾಗ ಜಿಲ್ಲೆಯನ್ನು ಪ್ರವೇಶಿಸಲು ತಿಮರೋಡಿಗೆ ಅವಕಾಶ ನೀಡಲಾಗಿದೆ. ಆದೇಶಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.