ಆರೆಸ್ಸೆಸ್ ವರ್ಸಸ್ ಆರೆಸ್ಸೆಸ್ ಜಗಳದ ಬಗ್ಗೆ ಸರಕಾರಕ್ಕೆ ಆಸಕ್ತಿ ಇಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಎಸ್‌ಐಟಿ ತನಿಖಾಧಿಕಾರಿಗಳ ಬಗ್ಗೆ ನಾವು ಮಾತನಾಡಲು ಆಗುವುದಿಲ್ಲ. ತನಿಖೆ ನಡೆಯುತ್ತಿದೆ. ಅಲ್ಲಿ ಏನಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಬಿಜೆಪಿಯವರಿಗೆ ಗೊತ್ತಿದ್ದರೆ ಸಂತೋಷ. ಷಡ್ಯಂತ್ರ ಎಂದರೆ ಏನು ಎಂಬುದನ್ನು ಬಿಜೆಪಿಯವರು ಹೇಳಲಿ. ಸೌಜನ್ಯ ಪ್ರಕರಣದಲ್ಲೂ ಹೌದೆನ್ನುತ್ತಾರೆ. ಧರ್ಮಸ್ಥಳ ಚಲೋನೂ ಅವರೇ ಮಾಡುತ್ತಾರೆ. ಬಿಜೆಪಿಯವರು ಆರೆಸ್ಸೆಸ್ ಮತ್ತು ಆರೆಸ್ಸೆಸ್‌ನಡುವಿನ ಗಲಾಟೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ವೇದಿಕೆ ಹತ್ತಿದಾಗ ಒಂದು, ಇಳಿದಾಗ ಒಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು.
ಜಾತಿ ಸಮೀಕ್ಷೆ ಮೂಲಕ ಕಾಂಗ್ರೆಸನ್ನು ಮುಗಿಸಲು ಸಿದ್ಧರಾಮಯ್ಯ ಹೊರಟಿದ್ದಾರೆಂಬ ಬಿಜೆಪಿ ನಾಯಕರ ಆರೋಪದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷದ ಬಗ್ಗೆ ಬಿಜೆಪಿಗೇಕೆ ಚಿಂತೆ. ನಮ್ಮ ಪಕ್ಷ ಉಳಿಸುತ್ತೇವೆಯೋ, ಬೆಳೆಸುತ್ತೇವೆಯೋ ಎಂಬ ಬಗ್ಗೆ ಬಿಜೆಪಿಗೇಕೆ ಆಸಕ್ತಿ. ಅವರಿಗೇ ಕಾಂಗ್ರೆಸ್ ನಾಶ ಆಗುವುದೇ ತಾನೆ ಅವರಿಗೆ ಬೇಕಿರುವುದು. ಮೊದಲು ಕರ್ನಾಟಕದಲ್ಲಿ ಅವರು ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲಿ. ಈಗಾಗಲೇ ಯತ್ನಾಳ್ ಅವರಿಗೆ ಗೇಟ್ ಪಾಸ್ ನೀಡಲಾಗಿದ್ದು, ಇವರ ವಿರುದ್ಧ ಇನ್ನೂ ಎಂಟು ಹತ್ತು ಜನ ಕಾಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತೆ ಮಾಡುವುದು ಬಿಟ್ಟು ಅವರ ಪಕ್ಷದ ಬಗ್ಗೆ ಬಿಜೆಪಿ ನಾಯಕರು ಚಿಂತೆ ಮಾಡಲಿ. ಬಿಜೆಪಿಯ ಪ್ರಸಕ್ತ ನಾಯಕರಾದ ವಿಜಯೇಂದ್ರ ಮತ್ತು ಅಶೋಕ್ ಬಗ್ಗೆ ಯತ್ನಾಳ್ ಅವರ ಅಭಿಪ್ರಾಯವೇನು ಎಂಬುದನ್ನು ಅವರು ತಿಳಿದುಕೊಳ್ಳಲಿ ಎಂದು ಅವರು ಹೇಳಿದರು.