ದೇವಸ್ಥಾನಗಳ ಹಣ ಸರಕಾರದ ಖಜಾನೆ ಸೇರೋಲ್ಲ, ರಾಜಕಾರಣಕ್ಕಾಗಿ ಬಿಜೆಪಿಯಿಂದ ಅಪಪ್ರಚಾರ: ರಾಮಲಿಂಗಾ ರೆಡ್ಡಿ
ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಕೆಲಸವಿಲ್ಲ. ಅವರಿಗೆ ಕಾನೂನಿನ ಅರಿವಿದೆ, ಆದರೆ ಪೆಚ್ಚು ಜನಗಳು. ಹಾಗಾಗಿ ದೇವಸ್ಥಾನದ ಪೂಜೆಯ ಮೊತ್ತ ಹೆಚ್ಚಿಸಿ ಗ್ಯಾರಂಟಿಗೆ ಬಳಸಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಚೇಷ್ಟೆ ಮಾಡದಿದ್ದರೆ ನಿದ್ದೆಯೇ ಬರುವುದಿಲ್ಲ. ಧಾರ್ಮಿಕ ಪರಿಷತ್ ಕಾಯಿದೆ ಜಾರಿಗೆ ಬಂದು, 22 ವರ್ಷಗಳಲ್ಲಿ ದೇವಸ್ಥಾನಗಳ ಒಂದು ರೂ. ಕೂಡಾ ಸರಕಾರದ ಖಜಾನೆಗೆ ಬಂದಿಲ್ಲ. ಬಿಜೆಪಿಯವರಿಗೂ ಈ ವಿಚಾರ ಗೊತ್ತಿದ್ದೆ. ಹಾಗಿದ್ದರೂ, ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
1997ರಲ್ಲಿ ಜೆ.ಎಚ್.ಪಟೇಲ್ ಸಿಎಂ ಆಗಿದ್ದಾಗ ರಾಜ್ಯ ಧಾರ್ಮಿಕ ಪರಿಷತ್ ಎಂಬ ಹೊಸ ಮಸೂದೆ ಮಂಡಿಸಿದ್ದು, 2003ರಲ್ಲಿ ಅಂದಿನ ಸಿಎಂ ಎಸ್.ಎಂ.ಕೃಷ್ಣ ಕಾನೂನು ಮಾಡಿದ್ದರು. ಅದರಂತೆ ರಾಜ್ಯ, ಜಿಲ್ಲಾಮಟ್ಟದಲ್ಲಿ ಪರಿಷತ್ ಸದಸ್ಯರ ನೇಮಕ ಮಾಡಲಾಗುತ್ತಿದೆ. ರಾಜ್ಯದಲ್ಲಿ ಎ ಮತ್ತು ಬಿ ಗ್ರೇಡ್ನ ಒಟ್ಟು 398 ದೇವಸ್ಥಾನಗಳಿದ್ದು, ಎಲ್ಲದಕ್ಕೂ ಅಧ್ಯಕ್ಷ ಮತ್ತು ಎಂಟು ಮಂದಿ ಸದಸ್ಯರು, ಮುಖ್ಯ ಅರ್ಚಕರು ಇರುತ್ತಾರೆ ಎಂದರು.
ಕಟೀಲು ದೇವಸ್ಥಾನದ ಪೂಜಾ ಶುಲ್ಕ ಹೆಚ್ಚಾದಾಗ, ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರಕಾರದ ವಿರುದ್ಧ ಅಪಪ್ರಚಾರ ಆರಂಭಿಸಿದರು. ಕಟೀಲು ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ, ಆನುವಂಶಿಕ ಅರ್ಚಕರು ಅಲ್ಲಿ ಇರುವ ಹಿನ್ನೆಲೆಯಲ್ಲಿ ಅಲ್ಲಿಗೆ ಸರಕಾರ ಕಾರ್ಯನಿರ್ವಹಣಾಧಕಾರಿ ನೇಮಕ ಕೂಡಾ ಮಾಡುವಂತಿಲ್ಲ. ಆಡಳಿತ ಸಂಪೂರ್ಣ ದೇವಸ್ಥಾನದ ಮಂಡಳಿಗೆ ಸೇರಿದೆ. ಸರಕಾರ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯದ ಆದೇಶವೇ ಇದೆ. ಹಾಗಾಗಿ ಅವರೇ ದರ ಪರಿಷ್ಕರಣೆ ಮಾಡಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.
2019ರಿಂದ 2023ರ ವರೆಗಿನ ಬಿಜೆಪಿ ಸರಕಾರದ ಅವಧಿಯಲ್ಲಿ 24 ದೇವಸ್ಥಾನಗಳ ಸೇವಾ ಶುಲ್ಕ ಪರಿಷ್ಕರಿಸಿದ್ದು, ನಾವು ಅದನ್ನು ತಪ್ಪು ಎಂದು ಹೇಳುವುದಿಲ್ಲ. ನಮ್ಮ ಸರಕಾರ ಬಂದ ಮೇಲೆ ಕುಕ್ಕೆ ಸುಬ್ರಮಣ್ಯ ಸೇರಿದಂತೆ 14 ದೇವಸ್ಥಾನಗಳ ಆಡಳಿತ ಮಂಡಳಿಯು ಕಾರಣಗಳನ್ನು ನೀಡಿ, ದರ ಪರಿಷ್ಕರಣೆ ಮಾಡಿಕೊಡಿ ಎಂದು ಮನವಿ ಮಾಡಿದೆ. ಇದಕ್ಕೆ ಮುಜರಾಯಿ ಇಲಾಖೆ ಆಯುಕ್ತರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
2010ರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳ ಶುಲ್ಕ ಹೆಚ್ಚಿಸುವಾಗ ಬಿಜೆಪಿ ಸರಕಾರವಿತ್ತು. ಈಗ 2025ರಲ್ಲಿ ದರ ಪರಿಷ್ಕರಣೆಗೆ ಅವಕಾಶ ಮಾಡಿಕೊಡಿ ಎಂದು ಆಡಳಿತ ಮಂಡಳಿ ಮನವಿ ಮಾಡುವಾಗ ನಮ್ಮ ಸರಕಾರವಿದೆ. ಹಾಗಂತ ಕಾಂಗ್ರೆಸ್ ಸರಕಾರ ಹೆಚ್ಚು ಮಾಡಿದೆ ಎನ್ನುವುದು ಸರಿಯೇ ಎಂದು ಪ್ರಶ್ನಿಸಿದರು.