
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರಿನ ಶಾಸಕರು, ಸಂಸದರು ಜನತೆಯ ಪ್ರಶ್ನೆಗಳಿಗೆ ಉತ್ತರಿಸಬೇಕು
ಮಂಗಳೂರು: ಸುರತ್ಕಲ್-ಬಿ.ಸಿ. ರೋಡ್ ಹೆದ್ದಾರಿ ಸಂಪೂರ್ಣ ದುರಸ್ತಿ, ಪೂರ್ಣ ಪ್ರಮಾಣದ ಡಾಮರೀಕರಣ ಹಲವು ವರ್ಷಗಳಿಂದ ನಮ್ಮ ಬೇಡಿಕೆ ಆಗಿತ್ತು.
(ರಸ್ತೆಯ ಎರಡು ಕಡೆ ಟೋಲ್ ಸಂಗ್ರಹಿಸುತ್ತಿದ್ದ (ಈಗ ಬಿ.ಸಿ. ರೋಡ್ ನಲ್ಲಿ ಟೋಲ್ ಸುಂಕ ಸಂಗ್ರಹ ಮುಂದುವರಿದಿದೆ) ಈ ಹೆದ್ದಾರಿಯಲ್ಲಿ ಸಣ್ಣ ಪುಟ್ಟ ಗುಂಡಿ ಮುಚ್ಚುವುದು, ಹುಲ್ಲು ಕತ್ತರಿಸುವುದು, ಬೀದಿ ದೀಪಗಳ ದುರಸ್ತಿಗೆ ಪ್ರತ್ಯೇಕ ಏಜನ್ಸಿ ಇರುತ್ತದೆ)
ಪೂರ್ಣ ಪ್ರಮಾಣದ ಮರು ಡಾಮರೀಕರಣ ಬೇಡಿಕೆಯ ಜೊತೆಗೆ ನಂತೂರು, ಕೆಪಿಟಿ ಜಂಕ್ಷನ್ ಗಳಲ್ಲಿ ಮೇಲ್ಸೇತುವೆ ನಿರ್ಮಾಣ, ಕುಂಟುತ್ತಿರುವ ಕೂಳೂರು ಸೇತುವೆ ಕಾಮಗಾರಿ ಪೂರ್ಣಗೊಳಿಸುವುದು, ಸರ್ವೀಸ್ ರಸ್ತೆಗಳ ನಿರ್ಮಾಣದ ಬೇಡಿಕೆ ಮುಂದಿಟ್ಟು ನಾವು ಸತತವಾಗಿ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದೇವೆ.
ಆದರೆ, ಪೂರ್ಣ ಪ್ರಮಾಣದ ಡಾಂಬರೀಕರಣ ಬದಲಿಗೆ ಗುಂಡಿ ಮುಚ್ಚುವ ಪ್ಯಾಚ್ ವರ್ಕ್/ ಹೆಚ್ಚು ಗುಂಡಿಗಳಿರುವ ಕೆಲವು ಸ್ಪಾಟ್ ಗಳಿಗೆ ಸೀಮಿತವಾಗಿ ಡಾಮರೀಕರಣಕ್ಕಾಗಿ ಹೆದ್ದಾರಿ ಪ್ರಾಧಿಕಾರ ಈ ವರ್ಷದ ಮಾರ್ಚ್ ತಿಂಗಳಲ್ಲಿ 28 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿತು. ಸ್ಥಳೀಯ ಗುತ್ತಿಗೆ ಕಂಪೆನಿಗೆ ಟೆಂಡರ್ ದೊರೆಯಿತು. (ಈಗ ಜನಾಕ್ರೋಶ ಭುಗಿಲೆದ್ದ ತರುವಾಯ ಅದೇ ಅನುದಾನದಲ್ಲಿ ತರಾತುರಿಯಿಂದ ಕೆಲವೆಡೆ ಗುಂಡಿ ಮುಚ್ಚುತ್ತಿರುವುದು)
ಈಗ ಇರುವ ಪ್ರಶ್ನೆ. ಬಿಸಿ ರೋಡ್ ನ ಬ್ರಹ್ಮರಕೂಟ್ಲು ಟೋಲ್ ಬೂತ್ ನಲ್ಲಿ ಟೋಲ್ ಸಂಗ್ರಹಿಸುತ್ತಿರುವ ಈ ರಸ್ತೆಯಲ್ಲಿ ಸಣ್ಣ ಪುಟ್ಟ ಗುಂಡಿಗಳನ್ನು ತಕ್ಷಣ ಮುಚ್ಚುವುದೂ ಸೇರಿದಂತೆ ಸಾಮಾನ್ಯ ನಿರ್ವಹಣೆಗೆ ನಿಯಮದಂತೆ ನೇಮಿಸಬೇಕಾದ ಏಜನ್ಸಿಯನ್ನು ಯಾಕೆ ನೇಮಕ ಮಾಡಲಾಗಿಲ್ಲ?
ಒಂದು ಬಾರಿಯೂ ಪೂರ್ಣ ಪ್ರಮಾಣದ ದುರಸ್ತಿ ಕಾಣದ ಈ ಹೆದ್ದಾರಿಯನ್ನು ಪ್ಯಾಚ್ ವರ್ಕ್ ಗಳ ಮೂಲಕ ಸರಿಪಡಿಸಲು ಸಾದ್ಯಇಲ್ಲ ಎಂದು ಅರಿವಿದ್ದರೂ, ಮತ್ತದೆ ಪ್ಯಾಚ್ ವರ್ಕ್ ಗೆ ಸೀಮಿತವಾಗಿ ಅನುದಾನ ಬಿಡುಗಡೆ ಮಾಡಿದ್ದು ಯಾಕೆ ?
ಸುಮಾರು 36 ಕಿ ಮಿ ಉದ್ದದ ರಸ್ತೆಯ ಗುರುತಿಸಲಾದ ಸ್ಪಾಟ್ ಗಳ ಪ್ಯಾಚ್ ವರ್ಕ್ ಗೆ 28 ಕೋಟಿಯಷ್ಟು ದೊಡ್ಡ ಮೊತ್ತದ ನಿಧಿ ಯಾಕೆ ಬೇಕು ? 28 ಕೋಟಿಯ ನಿಧಿಗೆ ಅಷ್ಟೆ ಮೊತ್ತ ಸೇರಿಸಿದರೆ 36 ಕಿ ಮೀ ಪೂರ್ತಿ ಡಾಂಬರೀಕರಣ ಸಾಧ್ಯ ಇಲ್ಲವೆ ? ಕೇವಲ ಪ್ಯಾಚ್ ವರ್ಕ್ ಗೆ ಇಷ್ಟು ದೊಡ್ಡ ಮೊತ್ತ ಖರ್ಚಾಗುತ್ತದೆಯೆ ? ಪ್ಯಾಚ್ ವರ್ಕ್ ಗೆ 28 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಿದ್ದು ಯಾರು ಮತ್ತು ಹೇಗೆ ? ಗುರುತಿಸಲಾದ ಸ್ಪಾಟ್ ಹೊರತು ಪಡಿಸಿ ರಸ್ತೆಯ ಉಳಿದ ಭಾಗದ ದುರಸ್ತಿ ಯಾವಾಗ ? ಆಗ ಮತ್ತೆ ಪೂರ್ತಿ ರಸ್ತೆಯ ದುರಸ್ತಿ ಅಂತ ಈಗ ಪ್ಯಾಚ್ ವರ್ಕ್ ಆಗಿರುವ ಭಾಗಗಳನ್ನು ಸೇರಿಸಿ ಯೋಜನೆ ರೂಪಿಸುತ್ತೀರಾ? ಅನುದಾನ ಬಿಡುಗಡೆ ಮಾಡುತ್ತೀರಾ?
ದುಡ್ಡು ಜನರದ್ದು, ಖರ್ಚು ಮಾಡುವುದು ಜನರ ಪ್ರಯಾಣದ ಅನುಕೂಲದ ಹೆಸರಿನಲ್ಲಿ, ಪ್ರಾಣ ಹೋಗುತ್ತಿರುವುದು, ನಾಶ, ನಷ್ಟ ಅನುಭವಿಸುತ್ತಿರುವುದು ಜನತೆಯೇ ಆಗಿರುವುದರಿಂದ ಲೆಕ್ಕ ಕೇಳುವ, ಪ್ರಶ್ನೆ ಕೇಳುವ ಎಲ್ಲಾ ಅಧಿಕಾರ ಜನತೆಗೆ ಇದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಮಂಗಳೂರಿನ ಶಾಸಕರುಗಳು, ಸಂಸದರುಗಳು ಉತ್ತರಿಸಬೇಕು ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.