ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ: ಭರತ್ ಶೆಟ್ಟಿ

ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ: ಭರತ್ ಶೆಟ್ಟಿ


ಮಂಗಳೂರು: ಸರಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದೇ ಎರಡು ವರ್ಷಗಳೆ ಕಳೆದಿದ್ದು ಈ ಬಾರಿಯ ಪ್ರಕೃತಿ ವಿಕೋಪವನ್ನು ಪರಿಗಣಿಸಿ 100 ಕೋಟಿ ಅನುದಾನದಲ್ಲಿ ಪ್ರಥಮ ಹಂತದಲ್ಲಿ 50 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಸರಕಾರವನ್ನು ಒತ್ತಾಯಿಸಿದರು.

ಕ್ಷೇತ್ರದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವಾರು ಪ್ರಮುಖ ರಸ್ತೆಗಳು ಹಾಗೂ ಒಳ ರಸ್ತೆಗಳು ಈ ಬಾರಿಯ ಮಳೆಗೆ ಹಾನಿಗೀಡಾಗಿದ್ದು, ಪ್ಯಾಚ್ ವರ್ಕ್ ಕಾಮಗಾರಿಗೆ ಸರಕಾರ ತಕ್ಷಣ 15 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದು, ಸರಕಾರ ಬೇಡಿಕೆಗೆ ಸ್ಪಂದಿಸದೆ ಹೋದಲ್ಲಿ ಸಾರ್ವಜನಿಕರೊಂದಿಗೆ ಹಾನಿಗೀಡಾದ ರಸ್ತೆ ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಳೆದ 2 ವರ್ಷಗಳಲ್ಲಿ ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ನೀಡಿದ್ದ ಅನುದಾನದಲ್ಲಿ ಕಾಲು ಭಾಗವನ್ನು ಕೂಡ ಕೊಟ್ಟಿಲ್ಲ. ಹೀಗಾದರೆ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ ಅಭಿವೃದ್ಧಿಯನ್ನು ಮಾಡುವುದಾದರೂ ಹೇಗೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಒಳಚರಂಡಿ ಕಾಮಗಾರಿ, ತಡೆಗೋಡೆಗಳ ನಿರ್ಮಾಣ, ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಕಾಮಗಾರಿಗಳು ಸ್ಥಗಿತಗೊಂಡಿದ್ದು ಸರಕಾರದ ನಿರ್ಲಕ್ಷವೇ ಕಾರಣ ಎಂದು ಆಪಾದಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯ ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮರಕಡ ಮರವೂರು ರಸ್ತೆ ಕಾಂಕ್ರಿ ಟಿಕರಣಕ್ಕೆ ಯೋಜನೆ ರೂಪಿಸಲಾಗಿದ್ದು ಅನುದಾನ 5 ಕೋಟಿ ಅಗತ್ಯವಿದೆ. ಬೈಕಂಪಾಡಿಯ ಕೈಗಾರಿಕಾ ಪ್ರದೇಶ ಕೆಐಎಡಿಬಿ ರಸ್ತೆ, ಓಡಿಸಿ ರಸ್ತೆಗೆ ಒಟ್ಟು 14 ಕೋಟಿ, ಕಾಟಿಪಳ್ಳ ಪೆಡ್ಡಿ ಅಂಗಡಿ ಸಂಪರ್ಕ ರಸ್ತೆಗೆ 1 ಕೋಟಿ ಹಾಗೂ ಮಳೆಯಿಂದ ಹಾನಿಗೀಡಾಗಿ ಅಲ್ಲಲ್ಲಿ ಹೊಂಡಗಳಿಂದ ತುಂಬಿರುವ ರಸ್ತೆಯನ್ನು ತತಕ್ಷಣ ಪ್ಯಾಚ್ ವರ್ಕ್‌ಗೆ ಆದ್ಯತೆ ನೀಡಿ ಅನುದಾನ ಒದಗಿಸಬೇಕು.

ಸರಕಾರ ಮಳೆ ಹಾನಿ ಪರಿಹಾರ ನಿಧಿ, ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆ ಮತ್ತಿತರ ಇಲಾಖೆಗಳಿಂದ ತುರ್ತು ಆರ್ಥಿಕ ನೆರವನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸರಕಾರ ಬೇಡಿಕೆಯನ್ನು ಪರಿಗಣಿಸದೆ ಹೋದಲ್ಲಿ ಹಾಳಾದ ರಸ್ತೆ ಮುಂಭಾಗ ಪ್ರತಿಭಟನೆಯನ್ನು ಸಾರ್ವಜನಿಕರೊಂದಿಗೆ ಸೇರಿ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರುಗಳ ಅಹವಾಲು ಆಲಿಸುವ, ಮಳೆಯಿಂದಾಗಿ ಏನೆಲ್ಲಾ ಸಮಸ್ಯೆಯಾಗಿದೆ ಎಂಬುದನ್ನು ಕನಿಷ್ಠ ಕೇಳುವ ಸೌಜನ್ಯವನ್ನು ಕೂಡ ತೋರಿಸುತ್ತಿಲ್ಲ ಎಂದು ಪ್ರಕಟಣೆಯಲ್ಲಿ ಆಪಾದಿಸಿದ್ದಾರೆ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article