ವ್ಯಕ್ತಿತ್ವ ನಿರ್ಮಾಣದ ಜೊತೆಗೆ, ಕೌಶಲ್ಯಗಳ ವೃದ್ಧಿಗೆ ಎನ್‌ಎಸ್‌ಎಸ್ ಸಹಕಾರಿ: ಡಾ. ಗಣನಾಥ ಶೆಟ್ಟಿ ಎಕ್ಕಾರು
ಅವರು ಇಂದು ನಗರದ ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮೂರು ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಅಭಿವಿನ್ಯಾಸ ಕಾರ್ಯಕ್ರಮ 2025-26ನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನಮ್ಮೊಂದಿಗೆ ಇರುವ ವ್ಯಕ್ತಿ ಮತ್ತು ಸಂಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕು. ಯಾವಾಗ ನಾವು ಅರ್ಥ ಮಾಡಿಕೊಳ್ಳುತ್ತೇವೆಯೋ ಆಗ ನಾವು ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು ಎನ್‌ಎಸ್‌ಎಸ್ ಅನ್ನು ಅರ್ಥ ಮಾಡಿಕೊಂಡಲ್ಲಿ ನಮ್ಮ ಜೀವನ ಉಜ್ವಲವಾಗುತ್ತದೆ ಎಂದರು.
ಎನ್‌ಎಸ್‌ಎಸ್‌ನ ಸ್ವಯಂ ಸೇವಕರು ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶವಿದ್ದು, ಇದರೊಂದಿಗೆ ಸಮಾಜ ಸೇವೆಯಲ್ಲಿ ತೆಡಗಿಸಿಕೊಳ್ಳಲು ಹಾಗೂ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಎಂ. ಭಂಡಾರಿ ಮಾತನಾಡಿ, ಕಾಲೇಜು ಶಿಕ್ಷಣದಲ್ಲಿ ಭೌತಿಕ ವಿಕಸನ ನಮ್ಮ ಮಾಕ್ಸ್‌ಕಾರ್ಡ್ ಮೂಲಕ ಅಂಕವನ್ನು ಹೆಚ್ಚಿಸಿದರೆ, ಎನ್‌ಎಸ್‌ಎಸ್‌ನಂತಹ ಪಠ್ಯೇತರ ಚಟುವಟಿಕೆಗಳು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಮಾಡುತ್ತವೆ. ಕಾಲೇಜು ಜೀವನದಲ್ಲಿ ಸಿಕ್ಕ ಅವಕಾಶವನ್ನು ಬಳಕೆ ಮಾಡಿಕೊಂಡು, ಮುಂದಿನ ಎರಡು ವರ್ಷಗಳಲ್ಲಿ ಎನ್‌ಎಸ್‌ಎಸ್ ಅನ್ನು ಗಂಭೀರವಾಗಿ ತೆಗೆದುಕೊಂಡು ಅದರಲ್ಲಿ ತೊಡಗಿಸಿಕೊಂಡಲ್ಲಿ ವ್ಯಕ್ತಿತ್ವ ವಿಕಸನದೊಂದಿಗೆ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಹಾಗೂ ತಮ್ಮತನವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ವಯಂ ಸೇವಕರಿಗೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ದುಗ್ಗಪ್ಪ ಕಜೆಕಾರ್ ಪ್ರಮಾಣವಚನ ಬೋಧಿಸಿದರು.
ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಲೋಕೇಶ್‌ನಾಥ್ ಬಿ., ಪ್ರಾಧ್ಯಾಪಕ ನಾಗರಾಜ್ ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಶೋಭಾಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಎನ್‌ಎಸ್‌ಎಸ್‌ನ ಮಹತ್ವವನ್ನು ತಿಳಿಸಿದರು. ಡಾ. ಮೋಹನ್ ದಾಸ್ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು. ಕಾಲೇಜಿನ ಎನ್ಎಸ್ಎಸ್ ಘಟಕಗಳ ವಿದ್ಯಾರ್ಥಿ ಕಾರ್ಯದರ್ಶಿಗಳಾಗಿ ಮೋಹಿತ್, ಸಿಂಚನ, ಅಕ್ಷಯ್, ಭೂಮಿಕಾ, ನಿಧಿಶ್ ಹಾಗೂ ನಿಶ್ಮಿತಾ ಆಯ್ಕೆಯಾದರು.
ಸ್ವಯಂಸೇವಕರುಗಳಾದ ನಿಶ್ಮಿತಾ ಸ್ವಾಗತಿಸಿದರು. ಸಿಂಚನ ನಿರೂಪಿಸಿದರು. ಭೂಮಿಕಾ ವಂದಿಸಿದರು.