ಮಾದಕ ವಸ್ತು ಮಾರಲು ಯತ್ನಿಸುತ್ತದ್ದ ಆರೋಪಿಗಳ ಬಂಧನ
ಬಂಧಿತ ಆರೋಪಿಗಳನ್ನು ಕಾವೂರು ನಿವಾಸಿ, ಚಿರಾಗ್ ಸನಿಲ್, ಅಶೋಕನಗರದ ಹೊಯಿಗೆಬೈಲು ನಿವಾಸಿ ಆಲ್ವಿನ್ ಕ್ಲಿಂಟನ್ ಡಿ’ಸೋಜಾ, ಕೇರಳದ ಮಲ್ಲಾಪ್ಪುರಂನ ವೆಲ್ಲಾಯುರ್ ನಿಲಾಂಬುರ್ ನಿವಾಸಿ ಅಬ್ದುಲ್ ಕರೀಂ ಇ.ಕೆ. (52), ಮಂಗಳೂರಿನ ಕುಲಶೇಖರದ ನಿವಾಸಿ ಜನನ್ ಯಾನೆ ಜನನ್ ಜಗನ್ನಾಥ (28), ಮಂಗಳೂರಿನ ಬೋಳೂರು ನಿವಾಸಿ ರಾಜೇಶ್ ಬಂಗೇರ ಯಾನೆ ಅಚ್ಚು ಯಾನೆ ರಕ್ಷಿತ್ (30), ಮಂಗಳೂರಿನ ಅಶೋಕನಗರದ ದಂಬೆಲ್ ನಿವಾಸಿ ವರುಣ್ ಗಾಣಿಗ (28) ಎಂದು ತಿಳಿದುಬಂದಿದೆ.
ಘಟನೆಯ ವಿವರ:
ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಮಾಹಿತಿ ಮೇರೆಗೆ ಕಾವೂರಿನ ಗಾಂಧಿನಗರದ ಮಲ್ಲಿ ಲೇ ಔಟ್ ಎಂಬಲ್ಲಿ ಸೆ.21 ರಂದು ಬೆಳಗ್ಗೆ ದಾಳಿ ನಡೆಸಿ ಸ್ಕೂಟರ್‌ನಲ್ಲಿ ಇಬ್ಬರು ಯುವಕರು ಎಂಡಿಎಂಎ ಮಾದಕ ವಸ್ತುವಿನೊಂದಿಗೆ ಪತ್ತೆಯಾಗಿದ್ದು, ಪರಾರಿಯಾಗಲು ಪ್ರಯತ್ನಿಸಿದ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಾವೂರಿನ ವಾಸಿಗಳಾದ ಚಿರಾಗ್ ಸನಿಲ್ ಮತ್ತು ಆಲ್ವಿನ್ ಕ್ಲಿಂಟನ್ ಡಿ’ಸೋಜಾ ಎಂದು ತಿಳಿದುಬಂದಿದ್ದು, ಅವರಿಂದ 22,30,000 ರೂ. ಮೌಲ್ಯದ 111.83 ಗ್ರಾಂ ಎಂಡಿಎಂಎ ಅನ್ನು ವಶಪಡಿಸಲಾಗಿದೆ.
ಈ ಬಗ್ಗೆ ಮಾದಕ ವಸ್ತು ದೊರೆತ ಮೂಲದ ಬಗ್ಗೆ ವಿಚಾರಿಸಲಾಗಿ ಕೇರಳದ ಅಬ್ದುಲ್ ಕರೀಂ ಎಂಬಾತನು ನೀಡಿದ ಹಣದಿಂದ ಮುಂಬೈಯಲ್ಲಿ ವಾಸವಿರುವ ಆಫ್ರಿಕನ್ ಪ್ರಜೆ ಬೆಂಜಮಿನ್ ಎಂಬಾತನಿಂದ ಆರೋಪಿ ಚಿರಾಗ್ ಸನಿಲ್ ಖರೀದಿ ಮಾಡಿ ತಂದಿರುವ ಬಗ್ಗೆ ತಿಳಿದು ಬಂದಿರುತ್ತದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕ ವಸ್ತು ಖರೀದಿಸಲು ಹಣವನ್ನು ನೀಡಿದ ಅಬ್ದುಲ್ ಕರೀಂ ಇ.ಕೆ. ಎಂಬಾತನನ್ನು ಸೆ.22 ರಂದು ಮಂಗಳೂರು ಕೇಂದ್ರ ರೇಲ್ವೆ ನಿಲ್ದಾಣದ ಬಳಿ ಬಂಧಿಸಲಾಗಿದೆ.
ಈಗಾಗಲೇ ಮೂರು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದು ತಿಳಿಸಿದ್ದು, ಈ ಬಗ್ಗೆ ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕರು ಅವರುಗಳ ಮಾಹಿತಿ ಪಡೆದು ಸೆ.21 ರಂದು ರಾತ್ರಿ 8.45 ಗಂಟೆಗೆ ಮಣ್ಣಗುಡ್ಡೆಯ ಸೆಂಟ್ರಲ್ ವೇರ್ ಹೌಸ್ ಬಳಿ ಮೂರು ಸ್ಕೂಟರ್‌ಗಳಲ್ಲಿ ನಿಂತುಕೊಂಡಿದ್ದವರ ಮೇಲೆ ದಾಳಿ ಮಾಡಿದಾಗ ತಪ್ಪಿಸಿ ಪರಾರಿಯಾಗಲು ಪ್ರಯತ್ನಿಸಿದ್ದು, ಅವರಿಂದ ಸುಮಾರು 21.03 ಗ್ರಾಂ ಕೊಕೇನ್ 1,90,000 ರೂ. ಮೌಲ್ಯದ ವಸ್ತುವನ್ನು ಸ್ವಾದೀನಪಡಿಸಿಕೊಡಿದ್ದು, ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಜನನ್ ಯಾನೆ ಜನನ್ ಜಗನ್ನಾಥ, ರಾಜೇಶ್ ಬಂಗೇರ, ಮತ್ತು ವರುಣ್ ಗಾಣಿಗ ಅವರನ್ನು ವಶಕ್ಕೆ ಪಡೆದು ದೂರು ನೀಡಿದ ಮೇರೆಗೆ 5 ಜನರ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.