ರಾಜ್ಯ ಹೆದ್ದಾರಿಯಲ್ಲಿ ತೇಪೆ ಕಾರ್ಯ ಆರಂಭ
Tuesday, September 23, 2025
ಮೂಡುಬಿದಿರೆ: ಹೊಂಡಗಳಾಗಿ ಮರಣಕ್ಕೆ ಆಹ್ವಾನ ನೀಡುತ್ತಿದ್ದ ರಾಜ್ಯ ಹೆದ್ದಾರಿಯಲ್ಲಿ ಇಂದು ಲೋಕೋಪಯೋಗಿ ಇಲಾಖೆಯಿಂದ ತೇಪೆ ಹಾಕುವ ಕಾರ್ಯ ಆರಂಭಗೊಂಡಿದೆ.
ಅಧಿಕ ಮಳೆ ಹಾಗೂ ಘನ ವಾಹನಗಳ ಓಡಾಟದಿಂದಾಗಿ ಮೂಡುಬಿದಿರೆಯಿಂದ ಧರ್ಮಸ್ಥಳಕ್ಕೆ ಸಾಗುವ ರಾಜ್ಯ ಹೆದ್ದಾರಿಯ ಕೆಲವು ಕಡೆಯ ತಿರುವಿನ ರಸ್ತೆಗಳಲ್ಲಿ ಮಧ್ಯ ರಸ್ತೆಯವರೆಗೆ ಡಾಂಬರು ಕಿತ್ತು ಹೋಗಿ ಹೊಂಡಗಳಾಗಿ ಮಾರ್ಪಾಡಾಗಿದ್ದು ಇದರಿಂದಾಗಿ ಶಾಲಾ ವಾಹನಗಳು, ಖಾಸಗಿ ವಾಹನ ಚಾಲಕರು, ವಿದ್ಯಾರ್ಥಿಗಳು ಶಿಕ್ಷಕಿಯರು ಸಹಿತ ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಪ್ರಾಣ ಭಯದಿಂದಲೇ ಸಂಚಾರ ಮಾಡುತ್ತಿದ್ದರು.
ಇದೀಗ ಎಚ್ಚೆತ್ತುಕೊಂಡಿರುವ ಪಿಡಬ್ಲ್ಯೂಡಿ ಇಲಾಖೆಯು ರಾಜ್ಯ ಹೆದ್ದಾರಿಯಲ್ಲಿರುವ ಹೊಂಡಗಳಿಗೆ ಜಲ್ಲಿ ಮಿಶ್ರಿತ ಮರಳು ಹುಡಿಯನ್ನು ಹಾಕಿ ಮುಚ್ಚುವ ಕೆಲಸವನ್ನು ಆರಂಭಿಸಿದೆ.
ಮಳೆಗೆ ತೇಪೆ ಉಳಿಯಬಹುದೇ..?:
ಪುರಸಭಾ ವ್ಯಾಪ್ತಿಯ ಕೆಲವು ಕಡೆಯ ರಸ್ತೆಯಲ್ಲಿ ಹೊಂಡಗಳಿರುವಲ್ಲಿಗೆ ಪುರಸಭೆಯು ತೇಪೆಯನ್ನು ಹಾಕಿದ್ದು ಅದು ಒಂದೇ ಮಳೆಗೆ ಕಿತ್ತು ಬಂದು ಜಲ್ಲಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿತ್ತು. ಇದೀಗ ಪಿಡಬ್ಲ್ಯೂಡಿ ಇಲಾಖೆಯು ರಾಜ್ಯ ಹೆದ್ದಾರಿಗೆ ಹಾಕುತ್ತಿರುವ ತೇಪೆ ಜೋರಾಗಿ ಬೀಳುವ ಮಳೆಯ ರಭಸಕ್ಕೆ ಎಷ್ಟು ಗಟ್ಟಿಯಾಗಿ ನಿಲ್ಲಬಹುದು ಎಂಬ ಸಂದೇಹವೂ ವಾಹನ ಚಾಲಕರಲ್ಲಿ ಮೂಡುತ್ತಿದೆ.


