
ಸಂತ ಫಿಲೋಮಿನಾ ಕಾಲೇಜಿನಲ್ಲಿ ನಶಾಮುಕ್ತ ಭಾರತ ಮತ್ತು ಸಂಚಾರ ಜಾಗೃತಿ ಸುರಕ್ಷತಾ ಕಾರ್ಯಕ್ರಮ
Thursday, September 18, 2025
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಪುತ್ತೂರು ಸಂಚಾರ ಪೊಲೀಸ್ ಠಾಣೆ ಹಾಗೂ ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿನ ಕಾಲೇಜು ವಿದ್ಯಾರ್ಥಿ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ನಶಾಮುಕ್ತ ಭಾರತ ಹಾಗೂ ಸಂಚಾರ ಜಾಗೃತಿ ಸುರಕ್ಷತಾ ಕಾರ್ಯಕ್ರಮವು ಸೆ.18 ರಂದು ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ಎಸ್.ಜೆ.ಎಂ. ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಎಸ್. ಬೂಮಾರೆಡ್ಡಿ ಮಾತನಾಡಿ, ಯುವಜನತೆ ದೇಶದ ಸಂಪತ್ತು. ಯುವ ಪೀಳಿಗೆಯೇ ದೇಶದ ಭವಿಷ್ಯ. ಆದರೆ ಪ್ರಸಕ್ತ ಕೆಲವು ವಿದ್ಯಾಮಾನಗಳಿಂದ ಯುವ ಜನತೆ ಪ್ರಭಾವಿತರಾಗಿ ದಾರಿ ತಪ್ಪುತ್ತಿದ್ದಾರೆ. ಇದರ ಪರಿಣಾಮವಾಗಿ ಸಮಾಜದಲ್ಲಿ ಕೌಟುಂಬಿಕ ಮೌಲ್ಯಗಳು ನಶಿಸಿಹೋಗುತ್ತಿವೆ, ನಮ್ಮ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಡ್ರಗ್ಸ್, ಗಾಂಜಾ ಮುಂತಾದ ಮಾದಕ ವಸ್ತುಗಳ ವ್ಯಸನ ಸುಸ್ಥಿರ ಸಮಾಜಕ್ಕೆ ಹಾನಿಕಾರಕ ಹಾಗೂ ಇದು ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸಿದೆ. ಹಾಗಾಗಿ ಯುವಜನಾಂಗ ಇಂತಹ ವ್ಯಸನಗಳಿಂದ ಮುಕ್ತರಾಗಿ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಿಂದ ಇಂದು ಸಮಾಜದಲ್ಲಿ ನಿರ್ಮಾಣವಾಗಿರುವ ಕಂದಕಗಳ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣ ಹಾಗೂ ಅಂತರ್ಜಾಲಗಳನ್ನು ಇತಿಮಿತಿಯಲ್ಲಿ ಬಳಸಿ ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಸಂಚಾರ ಜಾಗೃತಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿ ನಂತರ ಸಾಮಾಜಿಕ ಸ್ವಾಸ್ಥ್ಯಕ್ಕೆ ತೊಡಕಾಗಿರುವ ಬಾಲ್ಯ ವಿವಾಹ ಪದ್ಧತಿಯ ಬಗ್ಗೆ ಮಾತನಾಡಿದ ಅವರು ಬಾಲ್ಯವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂದ ಅವರು ಜೊತೆಗೆ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ ಮೊಳೆಯಾರ್ ಅವರು ವಿದ್ಯಾರ್ಥಿಗಳು ಉತ್ತಮ ಅಭ್ಯಾಸವನ್ನು ರೂಢಿಸಿಕೊಂಡು ಕಾಲೇಜಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.
ಪುತ್ತೂರು ನಗರ ಸರ್ಕಲ್ ಇನ್‌ಸ್ಪೆಕ್ಟರ್ ಕಿರಣ್ ಜಾನ್ಸನ್ ಡಿ’ಸೋಜಾ, ಪುತ್ತೂರು ನಗರದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಂಜನೇಯ ರೆಡ್ಡಿ, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಕಾಲೇಜಿನ ಸಮಸ್ತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಥಮ ಬಿಎಸ್ಸಿಯ ಅಪರ್ಣಾ ಮತ್ತು ತಂಡ ಪ್ರಾರ್ಥಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಹಾಗೂ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ತೇಜಸ್ವಿ ಭಟ್ ವಂದಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕಿ ಸ್ಪರ್ಲ್ ಫಿಯೋನಾ ಪಿರೇರ ಕಾರ್ಯಕ್ರಮ ನಿರೂಪಿಸಿದರು.