
ಪೊಲೀಸ್ ಜತೆ ದುರ್ವರ್ತನೆ: ಪ್ರಕರಣ ದಾಖಲಿಸಲು ಸೂಚನೆ
ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ವ್ಯಕ್ತಿಯೊಬ್ಬ ಟ್ರಾಫಿಕ್ ಪೊಲೀಸರ ಜೊತೆಗೆ ದುರ್ವರ್ತನೆ ತೋರಿದ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸೂಚನೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಘಟನಾ ಸ್ಥಳದ ಸಿಸಿಟಿವಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ರಸ್ತೆ ದಾಟುತ್ತಿದ್ದ ಮಹಿಳೆಯರಿಗೆ ನೆರವಾಗಲು ವಾಹನಗಳನ್ನು ಕೈಹಿಡಿದು ನಿಲ್ಲಿಸುತ್ತ ಅವರನ್ನು ದಾಟಿಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಸ್ಕೂಟರಿನಲ್ಲಿ ನೇರವಾಗಿ ನುಗ್ಗಿ ಬಂದಿದ್ದು, ಇದಕ್ಕೆ ರಸ್ತೆ ಮಧ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಸ್ಕೂಟರ್ ಸವಾರನ ಬೆನ್ನಿಗೆ ಸವರುವ ರೀತಿ ಏಯ್ ಅಂತ ಹೊಡೆದಿದ್ದರು.
ಆದರೆ ಇದನ್ನೇ ನೆಪವಾಗಿಸಿಕೊಂಡ ಆ ವ್ಯಕ್ತಿ ಸ್ಕೂಟರನ್ನು ನಿಲ್ಲಿಸಿ ಟ್ರಾಫಿಕ್ ಪೇದೆಯ ಜೊತೆಗೆ ವಾಗ್ವಾದ ನಡೆಸಿದ್ದಾನೆ. ನನ್ನ ಮೇಲೆ ನೀನು ಹೇಗೆ ಕೈ ಮಾಡಿದ್ದೀಯಾ. ನಿನಗೆ ಅಂಥ ಅಧಿಕಾರ ಕೊಟ್ಟವರು ಯಾರು, ನೀನು ನನಗೆ ಹೊಡೆದಿದ್ದು ಯಾಕೆ, ಈಗಲೇ ಕ್ಷಮೆ ಕೇಳಬೇಕು ಎಂದು ಜೋರು ಧ್ವನಿಯಲ್ಲಿ ಬೈದಾಡುತ್ತಾ ಸೀನ್ ಕ್ರಿಯೇಟ್ ಮಾಡಿದ್ದಾನೆ. ಇದನ್ನು ಅಲ್ಲಿದ್ದ ಮತ್ತೊಬ್ಬ ವ್ಯಕ್ತಿ ಮೊಬೈಲಿನಲ್ಲಿ ಚಿತ್ರೀಕರಿಸಿದ್ದು ಜಾಲತಾಣದಲ್ಲಿ ಹಾಕಿದ್ದರು. ಇದರ ವಿಡಿಯೋ ಪೊಲೀಸ್ ಕಮಿಷನರ್ ಇರುವ ಗ್ರೂಪಿನಲ್ಲಿ ಹಾಕಲಾಗಿತ್ತು.
ವಿಡಿಯೋ ಆಧರಿಸಿ ಪೊಲೀಸ್ ಕಮಿಷನರ್ ಸ್ಥಳದ ಸಿಸಿಟಿವಿಯನ್ನು ತೆಗೆದು ಪರಿಶೀಲನೆಗೆ ಒಳಪಡಿಸಿದ್ದಾರೆ. ಟ್ರಾಫಿಕ್ ಪೇದೆ ತನ್ನ ಕರ್ತವ್ಯ ಮಾಡುತ್ತಿರುವುದು ವಿಡಿಯೋದಲ್ಲಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಸಾರ್ವಜನಿಕ ಜಾಗದಲ್ಲಿ ಪೊಲೀಸರನ್ನು ನಿಂದಿಸಿದ ಬಗ್ಗೆ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ.
ಅಲ್ಲದೆ, ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದು ಮಂಗಳೂರಿನಲ್ಲಿ ಕೆಲವು ಬುದ್ಧಿವಂತರು ತಾವೆಲ್ಲ ಹೀರೋಗಳು, ಪೊಲೀಸರು ಅವರನ್ನು ಪ್ರಶ್ನೆ ಮಾಡುವಂತಿಲ್ಲ ಎಂದುಕೊಂಡಿದ್ದಾರೆ. ಪೊಲೀಸರಿಗೆ ಕಾನೂನು ಈ ಅಧಿಕಾರವನ್ನು ಕೊಟ್ಟಿದೆ. ಯಾವುದೇ ಸಂದರ್ಭ ತನ್ನ ಉಪಸ್ಥಿತಿಯಲ್ಲಿ ಅಪರಾಧ ನಡೆದಾಗ, ಕಾನೂನು ಉಲ್ಲಂಘನೆಯಾದ ಸಂದರ್ಭದಲ್ಲಿ ಪೊಲೀಸರಿಗೆ ಬಲಪ್ರಯೋಗ ಮಾಡಲು ಅಧಿಕಾರ ಇದೆ. ಹೀಗಿರುವಾಗ ರಸ್ತೆಯಲ್ಲಿ ಟ್ರಾಫಿಕ್ ಕರ್ತವ್ಯ ಮಾಡುವ ಪೊಲೀಸರನ್ನು ಪ್ರಶ್ನಿಸುವ, ನಿಂದಿಸುವ ಅಧಿಕಾರ ಯಾರಿಗೂ ಇಲ್ಲ. ಅಲ್ಲಿದ್ದ ಪೊಲೀಸರೇ ಇಂಥ ಘಟನೆ ಆದಕೂಡಲೇ ಕೇಸು ದಾಖಲಿಸಿದರೆ ಇದೆಲ್ಲ ಮರುಕಳಿಸುವುದಿಲ್ಲ. ಪೊಲೀಸರು ಯಾವತ್ತೂ ತಾವು ಅಸಹಾಯಕ ಎಂದುಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದಾರೆ.