
ಸೆ.28 ರಂದು ಮಂಜುನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ
ಅವರು ಸೆ.17 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆದ ತಾಲೂಕಿನ ಎಲ್ಲ ಸಂಘಟನೆಗಳು ಹಾಗೂ ಭಕ್ತವರ್ಗದ ಸಮಾಲೋಚನಾ ಸಭೆಯಲ್ಲಿ ಮಾಹಿತಿ ನೀಡಿದರು. ತಾಲೂಕಿನ ಎಲ್ಲ ಭಕ್ತಾದಿಗಳು ಶ್ರೀ ಕ್ಷೇತ್ರದ ಮುಖ್ಯ ದ್ವಾರದಿಂದ ಬೆಳಗ್ಗೆ 10 ಗಂಟೆಗೆ ಕ್ಷೇತ್ರಕ್ಕೆ ತೆರಳಿ ಪ್ರಾರ್ಥಿಸಿ, ಬಳಿಕ ಮಹಾ ಚಂಡಿಕಾ ಯಾಗದ ಪೂರ್ಣಾಹುತಿ ಹಾಗೂ ಖಾವಂದರ ಆಶೀರ್ವಚನದಲ್ಲಿ ಭಾಗವಹಿಸುವಂತೆ ತಿಳಿಸಿದರು.
ಸೆ.21 ರಂದು ಅಪರಾಹ್ನ ಅಮೃತ ವರ್ಷಿಣಿ ಸಭಾಭವನದಲ್ಲಿ ನಡೆಯಲಿರುವ ಎಸ್‌ಡಿಎಂ ಕಾಲೇಜಿನ ಎಲ್ಲ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದಲ್ಲಿ ಭಾಗವಹಿಸುವಂತೆ ಹಿರಿಯ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂಚಾಲಕ, ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ, ತಾಲೂಕಿನ ಜನ ಧರ್ಮಸ್ಥಳ ಕುಟುಂಬದ ಸದಸ್ಯರು. ಶ್ರೀ ಕ್ಷೇತ್ರ ಧರ್ಮಸ್ಥಳ ದೇವರ ಕೋಣೆಯಿದ್ದಂತೆ, ಕ್ಷೇತ್ರ ಹಾಗೂ ಯಜಮಾನನ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ ವ್ಯವಸ್ಥಿತ ಅಪಪ್ರಚಾರದ ವಿರುದ್ಧ ಮನೆ ಹಾಗೂ ಕುಟುಂಬದ ಸದಸ್ಯರು ಒಂದಾಗಿ ಭಕ್ತಿ, ಶ್ರದ್ಧೆಯಿಂದ ಪ್ರಾರ್ಥಿಸಿ, ಪೂಜ್ಯರ ಜತೆಗೆ ನಾವಿದ್ದೇವೆ ಎಂದು ಸಾರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ಆತ್ಮವಿಶ್ವಾಸದೊಂದಿಗೆ ಕರ್ತವ್ಯಭ್ರಷ್ಟರಾಗದೆ, ಕೃತಘ್ನರಾಗದೆ ಕ್ಷೇತ್ರಕ್ಕೆ ಕೃತಜ್ಞರಾಗಿರಬೇಕು. ಒಳ್ಳೆಯ ಕೆಲಸದ ಜತೆಗೆ ನಾವಿದ್ದೇವೆ, ದುಷ್ಟ ಶಕ್ತಿಗಳನ್ನು ಒಳ್ಳೆಯ ಶಕ್ತಿಗಳಾಗಿ ಪರಿವರ್ತಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸುವ ಸಂದರ್ಭವಿದು. ಸುಳ್ಳು ವಿಜೃಂಭಿಸುತ್ತಿರುವಾಗ ಸತ್ಯದ ಮುಸುಕು ನಿಧಾನವಾಗಿ ಸರಿದು ಸತ್ಯದರ್ಶನವಾಗುವುದು ಎಂದರು.
ಈಗಾಗಲೇ ಗ್ರಾಮ, ವಲಯ, ಬೂತ್ ಮಟ್ಟದಲ್ಲಿ ಸಮಾಲೋಚನೆ ನಡೆದಿದ್ದು ತಾಲೂಕಿನ ಎಲ್ಲ ಸಂಘಟನೆಗಳು ಪಕ್ಷಭೇದ ಮರೆತು ಸಮಾವೇಶದಲ್ಲಿ ಭಾಗವಹಿಸಿ ಪೂಜ್ಯರ ಆಶೀರ್ವಚನದಲ್ಲಿ ಪಾಲ್ಗೊಳ್ಳಬೇಕು. ಸಮಾವೇಶದ ಕೊನೆಗೆ ಠರಾವು ಮಂಡಿಸಲಾಗುವುದು ಎಂದರು.
ಸಂಚಾಲಕ ಕೆ. ಮೋಹನ್ ಕುಮಾರ್ ಮಾತನಾಡಿ, ನವರಾತ್ರಿಯ ಪರ್ವಕಾಲದಲ್ಲಿ ನಡಯಲಿರುವ ಮಹಾಚಂಡಿಕಾ ಯಾಗದಲ್ಲಿ ತಾಲೂಕಿನ ಎಲ್ಲ ಭಕ್ತಾದಿಗಳು ಭಾಗವಹಿಸಿ ಹಿರಿಯರ ಮಾರ್ಗದರ್ಶನ, ಪೂಜ್ಯರ ಆಶೀರ್ವಾದ ಪಡೆಯುವುದರಿಂದ ಕೆಲವೇ ದಿನಗಳಲ್ಲಿ ಸತ್ಯದರ್ಶನವಾಗಲಿದೆ. ಮುಖ್ಯ ದ್ವಾರದಲ್ಲಿ ಎಲ್ಲ ಭಕ್ತಾದಿಗಳು ಜತೆಯಾಗಿ ಯಾಗಕ್ಕೆ ಬೇಕಾದ ಸುವಸ್ತುಗಳನ್ನು ಚೆಂಡೆ, ವಾದ್ಯ ಮೇಳದ ಮೆರವಣಿಗೆಯಲ್ಲಿ ಕೊಂಡೊಯ್ದು ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥಿಸಿ, ಮಹಾಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸಬೇಕು ಎಂದರು.
ಅಮೃತವರ್ಷಿಣಿ ಸಭಾಭವನದ ‘ಸತ್ಯದರ್ಶನ ಸಮಾವೇಶ’ದಲ್ಲಿ ಆಹ್ವಾನಿತ ಗಣ್ಯ ವ್ಯಕ್ತಿಗಳಿಂದ ಉಪನ್ಯಾಸ ಹಾಗೂ ಪೂಜ್ಯರ ಆಶೀರ್ವಚನ ನಡೆಯಲಿದೆ ಎಂದರು.
ವೇದಿಕೆಯಲ್ಲಿ ಶ್ಯಾಮಸುಂದರ ನಡ ಉಪಸ್ಥಿತರಿದ್ದರು. ಸಮಾಲೋಚನಾ ಸಭೆಯಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಪ್ರಮುಖರು, ಕ್ಷೇತ್ರದ ಭಕ್ತ ವರ್ಗ, ವರ್ತಕರು, ಯೋಜನೆಯ ಕಾರ್ಯಕರ್ತರು, ವೈದ್ಯರು, ಮಹಿಳೆಯರು ಭಾಗವಹಿಸಿ ಸಲಹೆ, ಸೂಚನೆ, ಅಭಿಪ್ರಾಯ ಮಂಡಿಸಿದರು. ಸೋಮಶೇಖರ ಶೆಟ್ಟಿ ಸ್ವಾಗತಿಸಿ, ಯೋಜನೆಯ ರಾಮಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.