
ರಸ್ತೆ-ಸೇತುವೆಗೆ ಹೋರಾಟ ನಡೆಸಿದ ವಿರುದ್ಧ ಕೇಸು ಹಿಂಪಡೆಯಲು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಪ್ರತಿಭಟನೆ
ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇರ್ದೆ ದೂಮಡ್ಕ-ಚಾಕೊಟೆ-ಮದಕ ಪರಿಶಿಷ್ಟ ಪಂಗಡದ ಸಂಪರ್ಕದ ರಸ್ತೆ ಸಮಪರ್ಕಗೊಳಿಸಬೇಕು. ಬಲ್ನಾಡು ಗ್ರಾಮದ ಕೋಂಕೆ ಪರಿಶಿಷ್ಟ ಪಂಗಡ ಕಾಲೊನಿಗೆ ಕಾಂಕ್ರೆಟ್ ರಸ್ತೆ ನಿರ್ಮಿಸಬೇಕು. ಕೋಂಕೆಯಲ್ಲಿ ತೋಡಿಗೆ ಸೇತುವೆ ನಿರ್ಮಾಣ ಮಾಡಬೇಕು. ಆರ್ಯಾಪು ಗ್ರಾಪಂನ ಮೇಗಿನ ಪಂಜದ ಪರಿಶಿಷ್ಟ ಪಂಗಡದ ಕುಟುಂಬಕ್ಕೆ 94 ಸಿಸಿ ಹಕ್ಕು ಪತ್ರ ವಿತರಣೆಗೆ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು.
ತಾಲೂಕು ಆಡಳಿತ ಸೌಧಕ್ಕೆ ಬೀಗ-ಎಚ್ಚರಿಕೆ:
ಈ ಸಂದರ್ಭ ಗಿರಿಧರ ನಾಯ್ಕ್ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡದವರು ವಾಸಿಸುವ ಪ್ರದೇಶಗಳಿಗೆ ರಸ್ತೆ ನಿರ್ಮಿಸಿ ಕೊಟ್ಟಿಲ್ಲ. ದಶಕಗಳಿಂದಲೂ ಈ ಬೇಡಿಕೆ ಹಾಗೆಯೇ ಉಳಿದುಕೊಂಡಿದೆ. ಬಲಾಢ್ಯರ ಮುಂದೆ ಬಡವರು ರಸ್ತೆ ಹಕ್ಕಿಗಾಗಿ ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಡ ಜನರ ಪರ ಹೋರಾಟ ಮಾಡಿದರೆ ನಮ್ಮೆಲ್ಲರ ಮೇಲೆ ಕೇಸು ದಾಖಲಿಸಿ ಹೋರಾಟ ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ. ಜನತೆಯ ಪರ ಮಾಡಿದ ಹೋರಾಟಕ್ಕೆ ಕೇಸು ಹಾಕಿರುವುದು ಖಂಡನೀಯ. ನಮ್ಮ ಜನಪರ ಹೋರಾಟ ಮುಂದುವರಿಯಲಿದೆ. ಬೇಡಿಕೆಗಳು ಈಡೇರದಿದ್ದರೆ ತಾಲೂಕು ಆಡಳಿತ ಸೌಧಕ್ಕೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ದೂಮಡ್ಕ-ಚಾಕೊಟೆ-ಮದಕದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ 13 ಮನೆಗಳಿಗೆ ರಸ್ತೆ ಇಲ್ಲದ ಕಾರಣ ತಮ್ಮ ಸ್ವಂತ ಖರ್ಚಿನಲ್ಲಿ ಕಚ್ಚಾ ರಸ್ತೆ ನಿರ್ಮಾಣ ಮಾಡಿದ್ದಾರೆ. ಇದನ್ನು ಕಾಂಕ್ರಿಟೀಕರಣಗೊಳಿಸಬೇಕು. ಇಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾದ 14 ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಈ ಕೇಸನ್ನು ಹಿಂಪಡೆಯಬೇಕು. ಬಲ್ನಾಡು ಗ್ರಾಮದ ಕೋಂಕೆಯಲ್ಲಿ 6 ಪರಿಶಿಷ್ಟ ಪಂಗಡದ ಮನೆಗಳಿದ್ದು ಇಲ್ಲಿಗೆ ರಸ್ತೆ ನಿರ್ಮಿಸಬೇಕು. ಆರ್ಯಾಪು ಗ್ರಾಮದ ಮೇಗಿನ ಪಂಜ ಎಂಬಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮನೆಗಳಿಗೆ ಇನ್ನೂ ೯೪ಸಿಸಿ ಮಂಜೂರುಗೊಳಿಸಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಪ್ರಮೋದ್, ಮುಖಂಡರಾದ ಕೃಷ್ಣಪ್ಪ ನಾಯ್ಕ, ಶೇಷಪ್ಪ ನಾಯ್ಕ, ಪವಿತ್ರ ದೇರಡ್ಕ, ಕೊರಗಪ್ಪ ನಾಯ್ಕ ಉಪಸ್ಥಿತರಿದ್ದರು. ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು. ದೇವಕಿ ವಂದಿಸಿದರು.