
ಲೋಕಾಯುಕ್ತ ದಾಳಿ ಬಳಿಕ ನಾಪತ್ತೆಯಾದ ತಹಶೀಲ್ದಾರ್
ಪುತ್ತೂರು: ಲೋಕಾಯುಕ್ತ ದಾಳಿ ಬಳಿಕ ನಾಪತ್ತೆಯಾದ ಪುತ್ತೂರು ತಹಶೀಲ್ದಾರ್ ಎಸ್.ಬಿ.ಕೂಡಲಗಿ ಇನ್ನೂ ಪತ್ತೆಯಾಗಿಲ್ಲ. ತಹಶೀಲ್ದಾರ್ ಕೂಡ ಲಂಚದಲ್ಲಿ ಆರೋಪಿ ಎಂದು ಲೋಕಾಯುಕ್ತ ಅಧಿಕಾರಿಗಳು ಎಫ್‌ಐಆರ್ ನಲ್ಲಿ ಉಲ್ಲೇಖಿಸಿದ್ದರು. ಅದರ ಬೆನ್ನಲ್ಲೇ ಕೂಡಲಗಿ ಯಾರಿಗೂ ಸಿಗದೆ ನಾಪತ್ತೆಯಾಗಿದ್ದಾರೆ.
ಆ.28ರಂದು ಅಕ್ರಮ-ಸಕ್ರಮದ ದರ್ಖಾಸು ಜಮೀನಿಗೆ ನಿರಾಕ್ಷೇಪಣಾ ಪತ್ರ ನೀಡಲು 12 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪುತ್ತೂರು ತಾಲೂಕು ಆಡಳಿತ ಕಚೇರಿಯ ಕೇಸ್ ವರ್ಕರ್ ಸುನೀಲ್ ಎಂಬವರನ್ನು ಬಂಧಿಸಿದ್ದರು. ತಹಸೀಲ್ದಾರ್ಗೆ ಹಣ ನೀಡಬೇಕಾಗುತ್ತದೆ ಎಂದು ತಿಳಿಸಿದ್ದರಿಂದ ತಹಸೀಲ್ದಾರ್ ಮೇಲೂ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.
ತಹಸೀಲ್ದಾರ್ ದಾಳಿ ನಡೆದ ದಿನದಿಂದ ಇಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಸದ್ಯಕ್ಕೆ ಅವರ ಕೆಲಸಗಳನ್ನು ಉಪ ತಹಶೀಲ್ದಾರ್ ಮಾಡುತ್ತಿದ್ದು, ಮುಂದೆ ಅವರು ಹಾಜರಾಗದೆ ಇದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ತಿಳಿಸಿದ್ದಾರೆ.
ದರ್ಖಾಸು ಜಾಗದ ಬಗ್ಗೆ ವಾರಿಸುದಾರರು ವೀಲು ಬರೆದಿಟ್ಟಿದ್ದು ಅದರ ಪ್ರಕಾರ 65 ಸೆಂಟ್ಸ್ ಜಮೀನಿನ ಹಕ್ಕು ದೂರುದಾರರಿಗೆ ಸೇರಿತ್ತು. 27 ವರ್ಷಗಳ ಹಿಂದೆ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನು ಇದಾಗಿತ್ತು. ಜಾಗವನ್ನು ಪ್ರಸ್ತುತ ಮಾರಾಟ ಮಾಡುವ ಉದ್ದೇಶದಿಂದ ದೂರುದಾರರ ಚಿಕ್ಕಪ್ಪ ತಹಸೀಲ್ದಾರ್ ಕಚೇರಿಯಿಂದ ನಿರಕ್ಷೇಪಣಾ ಪತ್ರ ಕೋರಿ 2024ರ ಡಿಸೆಂಬರ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಎನ್‌ಒಸಿ ಸಿಗದ ಕಾರಣ ಅದರ ಬಗ್ಗೆ ವಿಚಾರಿಸುವಂತೆ ಚಿಕ್ಕಪ್ಪ ಹೇಳಿದ ಪ್ರಕಾರ ದೂರುದಾರರು ಕಳೆದ ಜೂನ್ 26ರಂದು ಕೇಸ್ ವರ್ಕರ್ ಸುನಿಲ್ ಅವರಲ್ಲಿ ಕೇಳಿದ್ದರು.
ತಹಶೀಲ್ದಾರ್ ಸಹಿಗೆ ಬಾಕಿ ಇದೆ. ಅದಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ. ತಹಶೀಲ್ದಾರರಿಗೆ 10 ಸಾವಿರ ರೂ. ಕೊಡಬೇಕಾಗುತ್ತದೆ. ನನಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆಗಸ್ಟ್ 29ರ ಸಂಜೆ ಕೇಸ್ ವರ್ಕರ್ ಸುನಿಲ್ ದೂರುದಾರರಿಂದ 12 ಸಾವಿರ ರೂ. ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ. ಈ ವೇಳೆ, ತಹಶೀಲ್ದಾರ್ ಪಾತ್ರದ ಬಗ್ಗೆ ಆರೋಪ ಕೇಳಿಬಂದಿತ್ತು. ಆದರೆ ಕೇಸು ದಾಖಲಾಗುತ್ತಲೇ ತಹಸೀಲ್ದಾರ್ ಕೂಡಲಗಿ ಪುತ್ತೂರು ಬಿಟ್ಟು ಹೋಗಿದ್ದಾರೆ.