
ನಿರಂತರ ಮಳೆ: ಹೆಚ್ಚಿದ ಅಡಿಕೆ ಕೊಳೆರೋಗ ಬಾಧೆ: ಎಲೆಚುಕ್ಕಿ ರೋಗವೂ ವ್ಯಾಪಕ: ಅಡಿಕೆ ಬೆಳೆಗಾರರಿಗೆ ಗಾಯದ ಮೇಲೆ ಬರೆ..!
ಮೇ ತಿಂಗಳ ಮಧ್ಯಭಾಗದಿಂದ ಆರಂಭವಾದ ಮಳೆ ಎಡೆ ಬಿಡದೆ ಸುರಿದ ಕಾರಣ ಕೊಳೆ ರೋಗ ವ್ಯಾಪಕವಾಗಿ ಹರಡಲು ಕಾರಣವಾಗುತಿದೆ ಎಂದು ಕೃಷಿಕರು ಹೇಳುತ್ತಾರೆ.
ಮೂರುವರೆ ತಿಂಗಳ ಸತತ ಮಳೆಯಿಂದಾಗಿ ತಾಲೂಕಿನ ವಾಣಿಜ್ಯ ಬೆಳೆಗಳಿಗೆ ಸಂಕಷ್ಟ ಎದುರಾಗಿದೆ. ಅಡಿಕೆ ತೋಟಗಳಲ್ಲಿ ಕಣ್ಣೀರ ಕೋಡಿ ಹರಿದಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆರೋಗ ವ್ಯಾಪಿಸುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಮೇ ತಿಂಗಳಲ್ಲಿಯೇ ಮಳೆ ಆರಂಭಗೊಂಡು ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ನಿರಂತರ ಮಳೆ ಸುರಿದ ಕಾರಣ ಹಲವು ಮಂದಿ ಬೆಳೆಗಾರರಿಗೆ ಅಡಿಕೆಗೆ ಔಷಧಿ ಸಿಂಪಡಿಸಲು ಸಾಧ್ಯವಾಗಲಿಲ್ಲ.
ಕಳೆದ ಒಂದೂವರೆ ತಿಂಗಳಿನಿಂದ ನಿರಂತರ ಅಡಿಕೆ ಮಿಡಿ, ಬೆಳೆದ ಅಡಿಕೆಗಳು ಕಪ್ಪು ಬಣ್ಣಕ್ಕೆ ತಿರುಗಿ ಉದುರುತಿದೆ.ಕೊಳೆ ರೋಗದಿಂದ ಈ ಬಾರಿ ಶೇ.80 ಅಡಿಕೆ ಫಸಲು ನಾಶವಾಗಿದೆ ಎನ್ನುತ್ತಾರೆ ಪೆರುವಾಜೆಯ ಕೃಷಿಕರಾದ ಪುಷ್ಪರಾಜ ಶೆಟ್ಟಿ. ಔಷಧಿ ಸಿಂಪಡಿಸಿದರೂ ಅಧಿಕ ಮಳೆಯ ಕಾರಣದಿಂದ ಕೊಳೆ ರೋಗ ವ್ಯಾಪಿಸಿ ಬೆಳೆ ನಾಶ ಉಂಟಾಗಿದ್ದು ನಿರಂತರ ಅಡಿಕೆ ಉದುರಿ ಹೋಗಿದೆ ಎನ್ನುತ್ತಾರೆ ಅವರು.
ಕಳೆದ ವರ್ಷವೂ ಕೊಳೆ ರೋಗದಿಂದ ಹಲವು ಮಂದಿ ಕೃಷಿಕರ ಅಡಿಕೆ ಫಸಲು ನಾಶವಾಗಿತ್ತು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮಳೆ ಆರಂಭವಾದರೂ ಬಿಡುವು ಸಿಗುತ್ತಿತ್ತು. ಈ ಸಂದರ್ಭದಲ್ಲಿ ಔಷಧಿ ಸಿಂಪಡಿಸಲು ಅವಕಾಶ ಸಿಗುತ್ತಿತ್ತು. ಆದರೆ ಈ ಬಾರಿ ಮೇ.ತಿಂಗಳಿನಿಂದ ಆರಂಭವಾದ ಮಳೆ ನಿರಂತರ ಸುರಿದಿದೆ. ಅಡಿಕೆ ತೋಟಗಳು, ಮನೆಯ ಅಂಗಳ ಕಣ್ಣು ಬಣ್ಣಕ್ಕೆ ತಿರುಗಿ ಬಿದ್ದು ಕರಗಿದ ಅಡಿಕೆಗಳಿಂದಲೇ ತುಂಬಿದೆ.
ಸಾಮಾನ್ಯವಾಗಿ ಆಗಸ್ಟ್ 15ರ ನಂತರ ಮಳೆ ಪ್ರಮಾಣ ಕಡಿಮೆಯಾಗಿ ಅಲ್ಲೊಂದು ಇಲ್ಲೊಂದು ಅಡ್ಡ ಮಳೆ ಸುರಿಯುವುದು ವಾಡಿಕೆ. ಆದರೆ ಕಳೆದ ಒಂದು ವಾರದಿಂದ ಪ್ರತಿದಿನವೂ ಭಾರಿ ಮಳೆ ಸುರಿಯುತ್ತಿದೆ. ಇದು ಅಡಿಕೆ ತೋಟಗಳ ಚರಂಡಿಯಲ್ಲಿ ನೀರು ನಿಲ್ಲಲು ಕಾರಣವಾಗಿದೆ. ಅತಿಯಾದ ತೇವಾಂಶದಿಂದ ಕೊಳೆರೋಗ ಬಹುಬೇಗನೆ ತೋಟಕ್ಕೆ ವ್ಯಾಪಿಸುತ್ತದೆ.
ಈ ವರ್ಷ ಅಡಿಕೆ ಫಸಲು ಕೂಡ ಕಡಿಮೆಯೇ ಇದೆ. ಕಳೆದ ವರ್ಷದ ಅಡಿಕೆಗೆ ಈಗ ಉತ್ತಮ ಧಾರಣೆ ಬಂದಿದೆ. ಆದರೆ, ಮಳೆಯಿಂದ ಅಡಿಕೆ ಫಸಲು ಕೈಗೆ ಸಿಗದ ಸ್ಥಿತಿಯಿದ್ದು
ಕೈಯಿಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಸ್ಥಿತಿಯಾಗಿದೆ ಎನ್ನುತ್ತಾರೆ ಕೃಷಿಕರು. ಮಳೆ ಈ ಬಾರಿಯೂ ಕೈಕೊಟ್ಟಿದೆ ವ್ಯಾಪಕವಾಗಿ ಅಡಿಕೆ ಉದುರುತಿದೆ ಎನ್ನುತ್ತಾರೆ ಕೃಷಿಕರಾದ ಜಯಪ್ರಕಾಶ್ ಕುಕ್ಕೇಟ್ಟಿ
ಎಲೆಚುಕ್ಕಿಯೂ ಹರಡುತಿದೆ:
ಕೊಳೆ ರೋಗದ ಜೊತೆಗೆ ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗವೂ ವ್ಯಾಪಕವಾಗಿ ಹರಡುತಿದೆ ಎಂಬ ವರದಿಗಳಿವೆ. ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಅಡಿಕೆಗೆ ಕೊಳೆ ರೋಗದ ಜೊತೆಗೆ ಎಲೆಚುಕ್ಕಿ ರೋಗ ಭಾದೆಯೂ ಕಂಡು ಬರುತಿದೆ ಎಂದು ಕೃಷಿಕರು ಹೇಳುತ್ತಾರೆ.