ಸೀತಾರಾಮ ರೈ ಸವಣೂರು ಅವರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಅವರು, ಕಳೆದ 25 ವರ್ಷಗಳಿಂದ ಗಾಂಧಿ ಚಿಂತನ ವೇದಿಕೆಯ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಈ ಬಾರಿ ವೇದಿಕೆಯ ವತಿಯಿಂದ ರಾಜ್ಯ ಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ಅ.2 ಗಾಂಧಿ ಜಯಂತಿಯಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಂದು ಬೆಳಗ್ಗೆ ಜ್ಯೋತಿ ವೃತ್ತದಿಂದ ಗಾಂಧಿನಡಿಗೆ ಆರಂಭಗೊಂಡು ಗಾಂಧಿನಗರದ ತನಕ ತೆರಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಚೆನ್ನಕೇಶವ ದೇವಸ್ತಾನದ ಮುಂಭಾಗದಲ್ಲಿ ಶಾರದಾಂಬಾ ಕಲಾ ವೇದಿಕೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ವೇದಿಕೆಯ ಸಂಚಾಲಕ ಡಾ. ಸುಂದರ ಕೇನಾಜೆ ಮಾತನಾಡಿ, ಗಾಂಧೀಜಿಯವರ ಚಿಂತನೆಗಳನ್ನು ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಿದ ೭೦ ವರ್ಷ ಮೀರಿದ ಹಿರಿಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಗಾಂಧೀಜಿಯವರ ಗ್ರಾಮ ಸ್ವರಾಜ್ ಚಿಂತನೆಯಲ್ಲಿ ಸವಣೂರು ಗ್ರಾಮವನ್ನು ಶಿಕ್ಷಣ ಕ್ಷೇತ್ರವಾಗಿಸಿ ಅಭಿವೃದ್ಧಿ ಮಾಡಿದ ಸಾಧನೆಯನ್ನು ಗುರುತಿಸಿ ಸೀತಾರಾಮ ರೈ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗಾಂಧಿ ಚಿಂತನ ವೇದಿಕೆಯ ಸಂಚಾಲಕರಾದ ದಿನೇಶ್ ಮಡಪ್ಪಾಡಿ, ಚಂದ್ರಶೇಖರ ಪೇರಾಲು, ಶರೀಫ್ ಕಂಠಿ, ಶಂಕರ್ ಪೆರಾಜೆ ಉಪಸ್ಥಿತರಿದ್ದರು.