ಮೃತ್ಯುಂಜಯ ನದಿಯಲ್ಲಿ ಎರಡು ಕಾಡಾನೆ ಪ್ರತ್ಯಕ್ಷ
ಉಜಿರೆ: ಚಾರ್ಮಾಡಿ ಗ್ರಾಮದ ಅನ್ನಾರು ಎಂಬಲ್ಲಿ ಶುಕ್ರವಾರ ಸಂಜೆಯ ವೇಳೆ ಎರಡು ಕಾಡಾನೆಗಳು ಮೃತ್ಯುಂಜಯ ನದಿಯಲ್ಲಿ ಕಂಡುಬಂದಿವೆ.
ತೋಟಗಳ ಸಮೀಪ ನದಿಯಲ್ಲಿದ್ದ ಕಾಡಾನೆಗಳನ್ನು ಸ್ಥಳೀಯರು ಕಾಡಿನ ಕಡೆ ಅಟ್ಟಿದರು. ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ಮುಂಡಾಜೆ, ಕಡಿರುದ್ಯಾವರ, ಚಿಬಿದ್ರೆ, ಚಾರ್ಮಾಡಿ ಗ್ರಾಮದ ಪರಿಸರದಲ್ಲಿ ಬೀಡು ಬಿಟ್ಟಿದ್ದು ಅಪಾರ ಪ್ರಮಾಣದ ಕೃಷಿಹಾನಿ ಉಂಟು ಮಾಡಿವೆ.
ಸೋಮವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಹೆದ್ದಾರಿ ಸಮೀಪದ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಕಂಡುಬಂದಿತ್ತು. ಬಳಿಕ ರಾತ್ರಿ ಮರಿಯಾನೆ ಸಹಿತ ಮೂರು ಕಾಡಾನೆಗಳು ಕಡಿರುದ್ಯಾವರ ಗ್ರಾಮದಲ್ಲಿ ಅಪಾರ ಪ್ರಮಾಣದ ಕೃಷಿಹಾನಿ ಉಂಟುಮಾಡಿದ್ದವು.
ಮಂಗಳವಾರ ರಾತ್ರಿ ಮರಿಯಾನೆ ಸಹಿತ ಐದರಿಂದ ಆರು ಆನೆಗಳಿರುವ ಹಿಂಡು ಮುಂಡಾಜೆಯ ದುಂಬೆಟ್ಟಿನಲ್ಲಿ ಕಂಡುಬಂದಿತ್ತು.
ಬುಧವಾರ ಮಧ್ಯಾಹ್ನ 5 ಕಾಡಾನೆಗಳು ಇರುವ ಹಿಂಡು ಕಡಿರುದ್ಯಾವರ ಗ್ರಾಮದ ಪಣಿಕಲ್ಲು ಎಂಬಲ್ಲಿ ತೋಟದ ಸಮೀಪ ಕಂಡು ಬಂದಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.
ಮೃತ್ಯುಂಜಯ ನದಿ ಪರಿಸರ, ಕಾಪು, ದುಂಬೆಟ್ಟು, ಕಡಿರುದ್ಯಾವರ, ಚಿಬಿದ್ರೆ, ಚಾರ್ಮಾಡಿ ಗ್ರಾಮದ ಭಾಗಗಳು ಅರಣ್ಯ ಪ್ರದೇಶದಲ್ಲಿದ್ದು ಅಲ್ಲಿನ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಅತ್ತಿಂದಿತ್ತ ತಿರುಗಾಟ ನಡೆಸುತ್ತಿದ್ದು ಸ್ಥಳೀಯರಲ್ಲಿ ಭೀತಿಯ ವಾತಾವರಣ ಉಂಟುಮಾಡಿದೆ. ಸುಮಾರು 3 ವಾರಗಳ ಹಿಂದೆ ಅರಣ್ಯ ಇಲಾಖೆ ಆನೆಗಳನ್ನು ಚಾರ್ಮಾಡಿ ದಟ್ಟ ಅರಣ್ಯ ಕಡೆಗೆ ಅಟ್ಟಿತ್ತು. ಅದರ ಬಳಿಕ ಒಂದು ವಾರ ಆನೆಗಳು ಕಂಡುಬಂದಿರಲಿಲ್ಲ. ಇದೀಗ ಮತ್ತೆ ಆನೆಗಳ ದಾಂಧಲೆ ನಿರಂತರವಾಗಿ ಕಂಡುಬರುತ್ತಿದೆ.