
ಸಾಹಿತ್ಯ ಹಾಗೂ ಸಾಂಸ್ಕೃತಿಕ ನಿಕ್ಷೇಪಗಳ ಅಧ್ಯಯನ ಮತ್ತು ಸಂಶೋಧನೆ ಮಾಡಬೇಕು: ಪ್ರೊ. ಎಸ್. ಸತೀಶ್ಚಂದ್ರ
ಅವರು ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ವಿಭಾಗದ ಸಹಯೋಗದೊಂದಿಗೆ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ ‘ತತ್ವಪದಗಳು-ಸಾಂಸ್ಕೃತಿಕ ಅನುಸಂಧಾನ’ ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನತೆಗೆ ಹಾಗೂ ಜನಸಾಮಾನ್ಯರಿಗೆ ತತ್ವಪದಗಳ ಸಾರ್ವಕಾಲಿಕ ಮೌಲ್ಯ ಹೊಂದಿರುವ ಸಂದೇಶಗಳನ್ನು ತಿಳಿಸಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ್ ಮಾತನಾಡಿ, ತತ್ವಪದಗಳ ಸಾರವನ್ನು ತಿಳಿಯುವುದರಿಂದ ಸಮಾಜದಲ್ಲಿರುವ ಅಸಮಾನತೆ, ಅಂಕುಡೊಂಕು ಹಾಗೂ ಬೇಧಭಾವ ನಿವಾರಣೆಯಾಗಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸಂಕುಚಿತ ಮನೋಭಾವ ದೂರವಾಗುತ್ತದೆ ಎಂದು ಹೇಳಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್.ಎನ್. ಕಾಕತ್ಕರ್ ಬಿ.ಎ. ಅಂತಿಮ ಪದವಿ ತರಗತಿಯ ವಿದ್ಯಾರ್ಥಿಗಳು ರಚಿಸಿದ ‘ಭಿತ್ತಿಪತ್ರಿಕೆ’ಯನ್ನು ಅನಾವರಣಗೊಳಿಸಿದರು.
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಹಿರಿಯ ಅಧಿಕಾರಿ ಸತ್ಯನಾರಾಯಣ ಮತ್ತು ನಿವೃತ್ತ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಬೋಜಮ್ಮ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿಚಾರಸಂಕಿರಣದ ಸಂಚಾಲಕ ಪ್ರೊ. ನಾಗಣ್ಣ ಡಿ.ಎ. ವಂದಿಸಿದರು. ಕನ್ನಡ ಉಪನ್ಯಾಸಕಿ ಭವ್ಯಶ್ರೀ ಬಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು.