ಉಳ್ಳಾಲ ನಗರ ಸಾಮಾನ್ಯ ಸಭೆ: ಸ್ಥಾಯಿ ಸಮಿತಿಗೆ ಅಧ್ಯಕ್ಷರ ನೇಮಕಕ್ಕೆ ಆಕ್ಷೇಪ
ನಗರ ಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ದಿನಕರ್ ಉಳ್ಳಾಲ ಅವರು ಸ್ಥಾಯಿ ಸಮಿತಿಗೆ ಮೂರು ಮಂದಿ ಅಧ್ಯಕ್ಷರ ನೇಮಕಾತಿ ಬಗೆ ಕಾರ್ಯ ಸೂಚಿ ಪಟ್ಟಿಯಲ್ಲಿ ಪ್ರಸ್ತಾಪಿಸಿಲ್ಲ. ಅವರ ನೇಮಕಾತಿ ಆದ ಬಗ್ಗೆ ನಿರ್ಣಯ ಆಗದೇ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮೂವರು ಅಧಿಕಾರ ವಹಿಸಿದ್ದು ಹೇಗೆ? ಸ್ಥಾಯಿ ಸಮಿತಿಗೆ ಈ ರೀತಿ ಅಧ್ಯಕ್ಷರ ನೇಮಕ ಸರಿಯಲ್ಲ. ಜೆಡಿಎಸ್‌ನಿಂದ ಕೌನ್ಸಿಲರ್ ಆಗಿ ಆಯ್ಕೆ ಆದವರು ಅವಧಿ ಮುಗಿಯುವ ಮೊದಲೇ ಕಾಂಗ್ರೆಸ್ ಸೇರಿ ಸ್ಥಾಯಿ ಸಮಿತಿಗೆ ಅಧ್ಯಕ್ಷ ಹೇಗೆ ಆಗುತ್ತಾರೆ? ಅವರನ್ನು ಅಮಾನತು ಮಾಡಬೇಕು ಎಂದರು.
ಸಹಾಯಕ ಕಾರ್ಯಪಾಲಕ ಅಭಿಯಂತರರಾದ ತೇಜು ಮೂರ್ತಿ ಮಾತನಾಡಿ, ಸ್ಥಾಯಿ ಸಮಿತಿಗೆ ಮೂವರ ಅಧ್ಯಕ್ಷರ ನೇಮಕಕ್ಕೆ ತೀರ್ಮಾನ ಆಗಿದೆ. ಜಿಲ್ಲಾಧಿಕಾರಿ, ಶಾಸಕರ ಸೂಚನೆ ಮೇರೆಗೆ ಆಯ್ಕೆ ನಡೆದಿದೆ ಎಂದಾಗ ನಿರ್ಣಯ ಆಗಿರುವ ಬಗ್ಗೆ ಮಾಹಿತಿ ನೀಡಿ ಎಂದು ದಿನಕರ್ ಉಳ್ಳಾಲ ಪಟ್ಟು ಹಿಡಿದರು. ಈ ವಿಚಾರದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಯಿತು.
ಜಬ್ಬಾರ್ ಮಾತನಾಡಿ, ದಿನಕರ್ ಉಳ್ಳಾಲ ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದಾರೆ ಅವರು ಯಾವ ಪಕ್ಷದಲ್ಲಿ ಇದ್ದಾರೆ ಎಂದು ಪ್ರಶ್ನಿಸಿದರು.
ಕುಡಿಯುವ ನೀರು ಪೈಪ್‌ಲೈನ್‌ನಲ್ಲಿ ಚರಂಡಿ ನೀರು ಮಿಶ್ರಿತಗೊಂಡು ಸರಬರಾಜು ಆಗುತ್ತಿದೆ. 60 ಮನೆಗಳಿಗೆ ಕಲುಷಿತ ನೀರು ಹೋಗುತ್ತಿದೆ. ಮೂರು ವಾರ್ಡ್‌ಗಳಲ್ಲಿ ಈ ಸಮಸ್ಯೆ ಇದೆ. ಇದನ್ನು ಇಂಜಿನಿಯರ್‌ಗೆ ತೋರಿಸಿದ್ದೇವೆ. ಇದರಿಂದ ಜನರಿಗೆ ಜನರಿಗೆ ತೊಂದರೆ ಆಗುತ್ತಿದೆ. ಅಲ್ಲದೆ ಕುಡಿಯುವ ನೀರು ಪೈಪ್‌ಲೈನ್ ಕಾಮಗಾರಿಗೆ ಗಮ್ ಬಳಕೆ ಮಾಡುವುದು ಅಪಾಯಕಾರಿ. ಇದರಿಂದ ವಾಂತಿಭೇದಿ ರೋಗ ಬಂದಿದೆ. ಈ ಬಗ್ಗೆ ಕ್ರಮ ಆಗಬೇಕು ಎಂದು ಅಯ್ಯೂಬ್ ಆಗ್ರಹಿಸಿದರು.
ಅಸ್ಗರ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಯೇ ಬಗ್ಗೆ ಕರೆ ಮಾಡಿದರೆ ಎರಡು ದಿನ ಬಿಟ್ಟು ಬರುತ್ತಾರೆ. ಇದರಿಂದ ಸಮಸ್ಯೆ ಇತ್ಯರ್ಥ ಆಗದು ಎಂದರು. 1.60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಕಾಮಗಾರಿ ಅವ್ಯವಸ್ಥೆ ಆದರೆ ಹೇಗೆ, ಇದನ್ನು ಜವಾಬ್ದಾರಿ ಯುತ ವಾಗಿ ನಿರ್ವಹಣೆ ಮಾಡಬೇಕಲ್ವೇ ಎಂದು ದಿನಕರ್ ಉಳ್ಳಾಲ ಅಧಿಕಾರಿಗಳ ಗಮನ ಸೆಳೆದರು.
ಅಮೃತ 20 ಕುಡಿಯುವ ನೀರಿನ ಯೋಜನೆ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಮಾತನಾಡಿ, ಇದನ್ನು ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.
ಚೆಂಡು ಗುಡ್ಡೆ, ಮಾಸ್ತಿಕಟ್ಟೆ ಸಹಿತ ನಗರ ಸಭೆ ವ್ಯಾಪ್ತಿಯ ಎಲ್ಲಾ ರಸ್ತೆಗಳು ಹೊಂಡಗಳಿಂದ ತುಂಬಿವೆ. ಈ ಹೊಂಡ ಮುಚ್ಚುವ ಕಾರ್ಯ ಆಗುತ್ತಿಲ್ಲ. ಚೆಂಡು ಗುಡ್ಡೆ ಬಳಿ ಪರವಾನಿಗೆ ಇಲ್ಲದೆ ಏಳು ಅಂತಸ್ತಿನ ಕಟ್ಟಡ ನಿರ್ಮಾಣ ಆಗುತ್ತಿದೆ. ಇದರಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸದಸ್ಯರೊಬ್ಬರು ಪ್ರಶ್ನಿಸಿದರು.
ಹೊಂಡಗಳ ರಸ್ತೆ ಗುರುತಿಸಿ ಶೀಘ್ರ ಕಾಮಗಾರಿ ಮಾಡಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ತೇಜು ಮೂರ್ತಿ ಸಭೆಗೆ ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ನೇಮಕದ ಬಗ್ಗೆ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ ಬಗೆ ದಿನಕರ್ ಉಳ್ಳಾಲ ಪ್ರಶ್ನಿಸಿದಾಗ ವ್ಯಾಪಕ ಚರ್ಚೆ ನಡೆಯಿತು. ನಗರಸಭೆ ವತಿಯಿಂದ ಜಾಹೀರಾತು ಮೊತ್ತ ನೀಡಲಾಗಿಲ್ಲ ಎಂದು ಅಧ್ಯಕ್ಷ ಶಶಿಕಲಾ ಹೇಳಿದರು. ಬಿಲ್ ಇಲ್ಲದೇ ಹಣ ನೀಡುವುದು ಹೇಗೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಖಲೀಲ್ ಪ್ರಶ್ನಿಸಿದರು.
2018-19ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ಕೆ.ಪಿ.ಪಿ. ಮುಖಾಂತರ ಟೆಂಡರ್ ಕರೆದ ಕಾಮಗಾರಿಗೆ ಅನುಮೋದನೆ ನೀಡುವ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಉಳ್ಳಾಲ ದರ್ಗಾ ಉರೂಸ್ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ ಸಂದರ್ಭದಲ್ಲಿ ವೇದಿಕೆಯಿಂದ ಹಿಡಿದು 10 ಮೀ. ವ್ಯಾಪ್ತಿಯಲ್ಲಿ ಎರಡು ಶೌಚಾಲಯ ನಿರ್ಮಾಣಕ್ಕೆ 60,000 ರೂ. ಪಾವತಿಗೆ ಎಸ್‌ಡಿಪಿಐ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಸರ್ಕಾರದ ಆದೇಶ ಮೇರೆಗೆ ನಡೆಯುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಗೆ ದೂರದೂರುಗಳ ಶಿಕ್ಷಕರ ನೇಮಕಾತಿ ಮಾಡಬಾರದು. ಅವರಿಗೆ ಸಮೀಕ್ಷೆ ನಡೆಸಲು ಆಗುವುದಿಲ್ಲ. ದಿನಕ್ಕೆ ಒಂದು ಸಮೀಕ್ಷೆ ಕಷ್ಟದಲ್ಲಿ ಆಗುತ್ತದೆ. ಇದರ ಬದಲು ಹತ್ತಿರದ ಶಾಲೆಗಳ ಶಿಕ್ಷಕರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅವಕಾಶ ನೀಡಬೇಕು ಎಂದು ಕೌನ್ಸಿಲರ್ ದಿನಕರ್ ಅವರು ಗ್ರಾಮಕರಣಿಕ ಸುರೇಶ್ ಅವರ ಗಮನ ಸೆಳೆದರು.
ಪೈಪ್‌ಲೈನ್ ಕಾಮಗಾರಿಯಿಂದ ಇಂಟರ್ ಲಾಕ್ ಹಾನಿ ಆಗಿದೆ. ಅದನ್ನು ದುರಸ್ತಿ ಮಾಡುವ ಜವಾಬ್ದಾರಿ ಅಮೃತ್ 2.0 ಯೋಜನೆಯ ಅಧಿಕಾರಿಗಳದ್ದು, ಇದನ್ನು ದುರಸ್ತಿ ಯಾಕೆ ಮಾಡಿಲ್ಲ ಎಂದು ಗೀತಾ ಬಾಯಿ ಪ್ರಶ್ನಿಸಿದರು. ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶ್ರಫ್, ಖಲೀಲ್, ವೀಣ ಶಾಂತಿ ಡಿ ಸೋಜ ಉಪಸ್ಥಿತರಿದ್ದರು.