ಅಮ್ಮನಿಲ್ಲದ ಹೊತ್ತು, ಆಕೆಗೆ ಸರಿಸಾಟಿ ಯಾರಿಲ್ಲವೆಂದು ಅರಿವಾಗುವ ಮುತ್ತು
ಬಹುತೇಕ ಸಂದರ್ಭಗಳಲ್ಲಿ ಮಕ್ಕಳಿಗೆ ಅಮ್ಮನ ಬೆಲೆ ತಿಳಿಯುವುದೇ ಆಕೆ ಮನೆಯಿಂದ ಹೊರಹೋದಾಗ ಅಥವಾ ಕಾಲವಾದ ನಂತರದಲ್ಲೇ ಆಗಿರುತ್ತದೆ. ಯವಾಗಲೂ ಮನೆಯಲ್ಲಿದ್ದರೆ ಆಕೆಯನ್ನು ನಮಗೆ ಬೇಕಾದಾಗ ಹಾಗೆ ಬಳಸಿಕೊಳ್ಳುತ್ತೇವೆ. ಹಾಗಾಗಿ, ಮನೆಯಲ್ಲಿರುವಾಗ ಆಕೆಯ ಮಹತ್ವ ತಿಳಿಯುವುದೇ ಕಡಿಮೆ. ಯಾವುದೋ ಕಾರಣಕ್ಕೋ ಮನೆಯಿಂದ ಹೊರ ಹೋದಾಗ ಅಥವಾ ಆಕೆ ತನ್ನ ತವರು ಮನೆಗೆ ಹೋದಾಗ ಒಟ್ಟಾರೆಯಾಗಿ ಮನೆಯಲ್ಲಿ ಇಲ್ಲದೇ ಇರುವಾಗ ಮಾತ್ರವೇ ಆಕೆಯ ಬೆಲೆ ಏನೆಂದು ತಿಳಿಯುತ್ತದೆ.
ಇದಕ್ಕೂ ಮೊದಲು ನಾನು ಹೀಗೆಯೇ ಆಡುತ್ತಿದ್ದೆ. ಆದರೆ, ಅದೊಮ್ಮೆ ನನ್ನಮ್ಮ ಅಡುಗೆ ಮಾಡುವ ಮುನ್ನಾ ಮೀನು ಕತ್ತರಿಸುವಾಗ ಅವರ ಕೈಗೆ ಮೀನಿನ ಮುಳ್ಳು ತಾಗಿ ಗಾಯವಾಯಿತು. ಸ್ವಲ್ಪ ನಿರ್ಲಕ್ಷ್ಯ ತೋರಿದ ಪರಿಣಾಮ ಆಸ್ಪತ್ರೆ ಸೇರುವಷ್ಟು ಸಮಸ್ಯೆ ಉಲ್ಬಣವಾಯಿತು. ಚಿಕಿತ್ಸೆ ಮುಗಿದು ಮನೆಗೆ ಬರುವ ವೇಳೆಗೆ ಒಂದು ವಾರವೇ ಕಳೆದಿತ್ತು. ಆ ಒಂದು ವಾರವೇ ಅಮ್ಮನ ಎಲೆ ಎಷ್ಟು ಎಂಬುದು ನನ್ನ ಅರಿವಿಗೆ ಬಂದಿದ್ದು.
ಅಮ್ಮ ಮನೆಯಲ್ಲಿದ್ದುದರಿಂದ ಎಲ್ಲಾ ಕೆಲಸವನ್ನು ಆಕೆಯೇ ನಿಭಾಯಿಸುತ್ತಿದ್ದಳು. ಸಣ್ಣ-ಪುಟ್ಟ ಕೆಲಸ ಹೇಳಿದರೂ ಸಿಡಿಮಿಡಿಗೊಳ್ಳುತ್ತಿದ್ದೆ. ಅಲ್ಲದೇ, ಮನೆ ಕೆಲಸವನ್ನು ಅಷ್ಟಾಗಿ ಕಲಿಯುವ ಪರಿಸ್ಥಿತಿ ಇರಲಿಲ್ಲ. ಆಸ್ಪತ್ರೆ ಸೇರಿದ ನಂತರ ಇಡೀ ಮನೆಯ ಜವಾಬ್ದಾರಿ ನನ್ನ ಹೆಗಲ ಮೇಲೆಯೇ ಬಿದ್ದಿತು. ಆಗಲೇ ನಾನು ನೀರಿನಿಂದ ಹೊರಬಂದ ಮೀನಿನಂತಾಗಿದ್ದೆ. ಮನೆಕೆಲಸ ಮಾಡೋದು ಎಷ್ಟು ಕಷ್ಟ ಎಂದು ನನಗೆ ಆಗಲೇ ತಿಳುವಳಿಕೆ ಬಂದದ್ದು.
ಅಮ್ಮ ಇಲ್ಲದ ಮನೆ ಮನಸ್ಸು ಖಾಲಿ ಖಾಲಿ ಎನಿಸುತ್ತಿತ್ತು. ಅದೆಷ್ಟೋ ಬಾರಿ ಆಕೆ ಮನೆಗೆ ಯಾವಾಗ ಹಿಂತಿರುಗಿ ಬರುವರೋ ಎಂದು ಅವರ ದಾರಿಯನ್ನೇ ಕಾತುರದಿಂದ ಕಾಯುತ್ತಿದ್ದೆ. ಬೆಳಗ್ಗೆ ಹಾಸಿಗೆಯಿಂದ ಎದ್ದ ಕ್ಷಣದಿಂದ ರಾತ್ರಿ ಮಲಗುವ ತನಕ ಆಕೆಯದ್ದೇ ಕನವರಿಕೆಯಾಗುತ್ತಿತ್ತು. ರಾತ್ರಿ ಕನಸಲ್ಲೂ ಆಕೆಯದ್ದೇ ಜಪ ಮುಂದುವರೆಯುತ್ತಿತ್ತು.
ಅಮ್ಮನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳಿಗೆ ಬಹುತೇಕ ಸಂದರ್ಭಗಳಲ್ಲಿ ಅಮ್ಮ ಕೇವಲ ತಾಯಿ ಮಾತ್ರವಾಗಿರದೇ ಒಳ್ಳೆಯ ಸ್ನೇಹಿತೆಯಾಗಿಯೂ ಇರುವಳು. ನನಗೂ ಹಾಗೆಯೇ ಆಕೆ ತಾಯಿಗಿಂತ ಮಿಗಿಲಾಗಿ ಸ್ನೇಹಿತೆಯಂತೆ ಕಾಣುತ್ತಿದ್ದಳು. ನನ್ನೆಲ್ಲಾ ಖುಷಿ, ಸಂತೋಷ, ದುಃಖದ ಪಾಲುದಾರಳು ಅವಳೇ ಆಗಿರುತ್ತಿದ್ದಳು. ಕೇವಲ ಒಂದು ವಾರಕ್ಕೇ ಆಕೆಯನ್ನು ಬಿಟ್ಟಿರಲು ನಲುಗಿದ ಮನಸ್ಸು ಶಾಶ್ವತವಾಗಿ ತಾಯಿಯನ್ನು ಕಳೆದುಕೊಂಡ ಮಕ್ಕಳ ಸ್ಥಿತಿ ಏನಾಗಿರಬಹುದು ಎಂಬುದನ್ನು ಊಹಿಸಿಕೊಂಡರೂ ಸಣ್ಣಗೆ ಮೈ ನಡುಕ ಬರುತ್ತದೆ. ತಾಯಿ ಪ್ರೀತಿಗೆ ಬೆಲೆ ಕಟ್ಟಲಾಗದು, ಆಕೆ ಎಂದಿಗೂ ವಜ್ರವೇ ಸರಿ.
-ಅಪೇಕ್ಷಾ
ದ್ವಿತೀಯ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿ
ವಿಶ್ವವಿದ್ಯಾನಿಲಯ ಕಾಲೇಜು
ಮಂಗಳೂರು
