‘ಐ ಲವ್ ಮಹಮ್ಮದ್’ ಅಭಿಯಾನದ ನೆಪದಲ್ಲಿ ಹಿಂದೂಗಳ ಮೇಲೆ ದಾಳಿ: ಕಠಿಣ ಕ್ರಮಕ್ಕಾಗಿ ಸರ್ಕಾರಕ್ಕೆ ಮನವಿ
ಕರ್ನಾಟಕದಲ್ಲಿ ಇಂತಹ ಘಟನೆಗಳು ನಡೆಯದಂತೆ ಸರಕಾರ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ತಡೆಗಟ್ಟ ಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ನಿಯೋಗವೊಂದು ಶುಕ್ರವಾರ ಬಂಟ್ವಾಳ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿದೆ.
ದಾವಣಗೆರೆಯಲ್ಲಿ ಸೆ.24ರ ರಾತ್ರಿ, ಮುಸ್ಲಿಮ್ ಯುವಕರು ಹಿಂದೂಗಳ ಮನೆಗಳ ಮೇಲೆ ಬಲವಂತವಾಗಿ ‘ಐ ಲವ್ ಮೊಹಮ್ಮದ್’ ಫಲಕಗಳನ್ನು ಹಾಕಿದರು. ಇದನ್ನು ವಿರೋಧಿಸಿದ ಹಿಂದೂ ಮನೆಗಳ ಮೇಲೆ ಮತಾಂಧರ ಗುಂಪು ಕಲ್ಲು ತೂರಾಟ ಮಾಡಿದಲ್ಲದೇ, ಹಿಂದೂ ಮನೆಗೆ ನುಗ್ಗಿ ಹಿಂದೂ ಮಹಿಳೆಯರು ಮತ್ತು ಪುರುಷರನ್ನು ಥಳಿಸಲಾಗಿದೆ.
ಅದೇ ರೀತಿಯಲ್ಲಿ ಗುಜರಾತ್ನ ಗಾಂಧಿನಗರದಲ್ಲಿ ಆಸ್ತಿ, ಪಾಸ್ತಿಗಳಿಗೆ ಹಾನಿ ಉಂಟುಮಾಡಲಾಗಿದೆ. ಈ ದಾಳಿಗಳು ಕೇವಲ ಗುಜರಾತ್ ಅಥವಾ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಉತ್ತರ ಪ್ರದೇಶದ ಕಾನ್ಪುರ, ಬರೇಲಿದಿಂದ ಪ್ರಾರಂಭವಾದ ಈ ವಿವಾದ ಈಗ ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೂ ಹರಡುತ್ತಿದೆ. ಈ ಘಟನೆಗಳು ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ದೊಡ್ಡ ಸವಾಲು ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇಂತಹ ಘಟನೆಗಳ ಮೂಲಕ ಹಿಂದೂ ಸಮಾಜದಲ್ಲಿ ಭಯ ಮತ್ತು ಆತಂಕದ ವಾತಾವರಣವನ್ನು ಸೃಷ್ಟಿಸಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ಒಂದು ದೊಡ್ಡ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆ ಇರುವ ಅನುಮಾನಗಳಿದ್ದು,ಇದರ ಮೂಲವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಪ್ರಮುಖರಾದ ಶಿವ ನಾಯ್ಕ್, ಸೋಮಪ್ಪ, ಪ್ರೊ. ಗಿರೀಶ್ ಹೆಗ್ಡೆ, ನ್ಯಾಯವಾದಿ ಅಶ್ವಿನಿ, ಗಿರಿಧರ್ ಹೆಗ್ಡೆ, ಸದಾಶಿವ ಕಲ್ಲಡ್ಕ, ಕಮಲಾಕ್ಷ ಕಲ್ಲಡ್ಕ, ಹರೀಶ್ ಕುದನೆ, ಜಯಕುಮಾರ್ ಬಂಟ್ವಾಳ, ರಾಧಾಕೃಷ್ಣ, ನಾರಾಯಣ, ಯೋಗೀಶ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.