
ಬಿ.ಸಿ.ರೋಡು ವೃತ್ತಕ್ಕೆ ಕಾರು ಢಿಕ್ಕಿ: ಐಟಿ ಉದ್ಯೋಗಿಗಳಿಗೆ ಗಾಯ
ಬಂಟ್ವಾಳ: ಕಾರೊಂದು ಬಿಸಿ ರೋಡಿನ ನಾರಾಯಣ ಗುರು ವೃತ್ತಕ್ಕೆ ಢಿಕ್ಕಿ ಹೊಡೆದು ಚಾಲಕ ಸಹಿತ ಬೆಂಗಳೂರಿನ ಐಟಿ ಕಂಪೆನಿಯ ಉದ್ಯೋಗಿಗಳು ಗಾಯಗೊಂಡ ಘಟನೆ ಮಗಳವಾರ ಮುಂಜಾನೆ ಸಂಭವಿಸಿದೆ.
ಗಾಯಾಳುಗಳನ್ನು ಸುಳ್ಯ ಗ್ರಾಮದ ಅಜ್ಜಾವರ ನಿವಾಸಿ ಕುಮಾರಿ ಜಿ.ಎಸ್. ಶ್ರೀಜಿತ್ (26), ಬೆಂಗಳೂರಿನ ಕೆಪಿಎಂಜಿ ಐಟಿ ಕಂಪೆನಿಯ ಉದ್ಯೋಗಿ ಫರ್ಜಿನಾ ನಾಜರ್, ಬೆಂಗಳೂರಿನ ಡೀಲಿಯೆಟ್ ಐಟಿ ಕಂಪೆನಿಯ ಉದ್ಯೋಗಿ ಕೃಪಾಲ್ ಕೆ.ಬಿ. ಹಾಗೂ ಕಾರು ಚಾಲಕ ಮಂಜುನಾಥ್ ಎಂದು ಹೆಸರಿಸಲಾಗಿದೆ.
ಇವರು ಸೋಮವಾರ ಮದ್ಯರಾತ್ರಿ 12.30ರ ವೇಳೆಗೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟು, ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಗೆ ಬಿ.ಸಿ.ರೋಡಿಗೆ ತಲುಪಿದಾಗ ನಾರಾಯಣ ಗುರು ಸರ್ಕಲ್ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಸರ್ಕಲಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಕಾರು ಜಖಂಗೊಂಡಿದ್ದಲ್ಲದೇ, ಕಾರಿನಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ತುಂಬೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.