
ಕರಾವಳಿಯಲ್ಲಿ ಸಂಜೆ ಉತ್ತಮ ಮಳೆ: ಕಳೆದ ಹಲವು ದಿನಗಳಿಂದ ಹಿಂಗಾರು ಮಳೆಯ ಪ್ರಮಾಣದಲ್ಲಿ ಏರಿಕೆ
ಮಂಗಳೂರು: ಕರಾವಳಿಯಲ್ಲಿ ಹಿಂಗಾರು ಮಳೆಯ ಪ್ರಮಾಣದಲ್ಲಿ ಏರಿಕೆ ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ಸಂಜೆ ಹೊತ್ತು ಹಾಜರಾಗುತ್ತಿರುವ ಮಳೆ ಮಂಗಳವಾರ ಕೂಡ ನಗರ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಉತ್ತಮವಾಗಿ ಸುರಿದಿದ್ದು, ದೀಪಾವಳಿಯ ಸಡಗರಕ್ಕೂ ಕೊಂಚ ಅಡ್ಡಿಯಾಗಿದೆ.
ಮಂಗಳವಾರ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣದ ಜತೆಗೆ ಮಳೆ ಉತ್ತಮವಾಗಿ ಬಂದಿದೆ. ಮಂಗಳೂರು ಸುರತ್ಕಲ್ ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಗುಡುಗು ಸಿಡಿಲಿನ ಜತೆಯಲ್ಲಿ ಉತ್ತಮ ಮಳೆ ಕಾಣಿಸಿಕೊಂಡಿದೆ. ಉಳಿದಂತೆ ಪುತ್ತೂರು, ಸುಳ್ಯ, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ ಭಾಗದಲ್ಲಿ ಉತ್ತಮ ಮಳೆ ದಾಖಲಾಗಿದೆ. ಹಲವು ಕಡೆಯಲ್ಲಿ ಸಿಡಿಲು, ಗುಡುಗು ಜತೆಗೆ ಗಾಳಿಯ ಅಬ್ಬರದಿಂದ ಸಾಕಷ್ಟು ಕಡೆಯಲ್ಲಿ ಮೆಸ್ಕಾಂನ ಹತ್ತಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದರೆ ಗುಡುಗು, ಸಿಡಿಲಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದೆ. ಮಳೆ ಮತ್ತಷ್ಟು ದಿನ ಮುಮದುವರಿಯುವ ಸಾಧ್ಯತೆಯಿದೆ.
ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮುಂದಿನ 10 ದಿನಗಳವರೆಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆಗಳಿವೆ. ಈಗಿನಂತೆ ಅ.30ರಿಂದ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ನ.2ರಿಂದ ದಿನದ ಹೆಚ್ಚಿನ ಅವಧಿಯೂ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ. ದ.ಕ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 14.9 ಮಿಮಿ ಮಳೆ ದಾಖಲಾಗಿತು.
ಭಾರಿ ಮಳೆಯ ಸಾಧ್ಯತೆ
ಮತ್ತಷ್ಟು ಮಳೆ ಸಾಧ್ಯತೆಳ ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಅ.23ರ ಸುಮಾರಿಗೆ ಚಂಡಮಾರುತವಾಗಿ ಪರಿವರ್ತನೆಗೊಂಡು ತಮಿಳುನಾಡು ಕರಾವಳಿ ಸಮೀಪ ತಲುಪುವ ನಿರೀಕ್ಷೆ ಇದೆ. ಒಂದು ಲೆಕ್ಕಾಚಾರದಂತೆ ಭಾರತದ ಪೂರ್ವ ಕರಾವಳಿಯಲ್ಲಿ ಉತ್ತರಕ್ಕೆ ಚಲಿಸುವ ಸಾಧ್ಯತೆಗಳಿವೆ. ಈ ರೀತಿ ಆದರೆ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಬಹುದು. ತಮಿಳುನಾಡು ಕರಾವಳಿ ಮೂಲಕ ಭೂ ಪ್ರವೇಶಿಸಿ ಅ.26ರ ಸುಮಾರಿಗೆ ಅರಬ್ಬಿ ಸಮುದ್ರ ಸೇರುವ ನಿರೀಕ್ಷೆ ಇದೆ. ಈ ರೀತಿಯಾದ ರಾಜ್ಯದಲ್ಲಿ ಭಾರಿ ಮಳೆಯ ಸಾಧ್ಯತೆ ಹೆಚ್ಚಿದೆ.