ವೃದ್ಧೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ
ಬಂಟ್ವಾಳ: ವೃದ್ಧೆಯೋರ್ವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಸರಪಾಡಿ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಅಲ್ಲಿಪಾದೆ ನಿವಾಸಿ ಮೀನಾಕ್ಷಿ ಪೂಜಾರಿ (70) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಸರಪಾಡಿಯಲ್ಲಿ ಅಂಗಡಿಯೊಂದಕ್ಕೆ ಹೋಗಿದ್ದ ಮೀನಾಕ್ಷಿ ಬಳಿಕ ನೇರವಾಗಿ ನೇತ್ರಾವತಿ ನದಿ ತೀರಕ್ಕೆ ಬಂದು ನೀರಿಗೆ ದುಮುಕಿದ್ದಾರೆ.
ಈ ಸಂದರ್ಭ ಸರಪಾಡಿಯಿಂದ ಬರಿಮಾರು ಕಡವಿನ ಬಾಗಿಲಿಗೆ ಜನಸಾಗಿಸುವ ದೋಣಿಯ ನಾವಿಕ ಅಲ್ಲೇ ಇದ್ದು, ಅವರನ್ನು ಕಡವಿನ ಬಾಗಿಲಿಗೆ ಬರುವವರಿದ್ದೀರಾ ಎಂದು ಕೇಳಿದ್ದಾರೆ. ಆದರೆ ಈಕೆ ನಾನು ಬರುವುದಿಲ್ಲ ಎಂದು ಹೇಳಿ ಅಲ್ಲೇ ಉಳಿದುಕೊಂಡಿದ್ದಾರೆ. ಅದಾದ ಬಳಿಕ ನಾವಿಕ ದೋಣಿಯನ್ನು ಕಡವಿನ ಬಾಗಿಲಿಗೆ ಕೊಂಡುಹೋಗಿದ್ದು, ಕೆಲವೇ ಹೊತ್ತಿನಲ್ಲಿ ಮೀನಾಕ್ಷಿ ಅವರು ನದಿಗೆ ಹಾರಿದ್ದಾರೆ ಎನ್ನಲಾಗಿದೆ.
ಆಗ ಅಲ್ಲಿ ನದಿಯಿಂದ ಮರಳು ತೆಗೆಯುವ ಕಾರ್ಮಿಕರು ನೋಡಿ ಕೂಡಲೇ ನದಿಗೆ ಹಾರಿ ಅವರನ್ನು ಬದುಕಿಸುವ ಪ್ರಯತ್ನ ಮಾಡಿದರೂ ವಿಫಲವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಕ, ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.