ಪ್ರಚೋದನಕಾರಿ ಭಾಷಣ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು
ಅ.20 ರಂದು ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರನ್ನು ಅವಮಾನಿಸಿ, ಗರ್ಭಿಣಿ ಮಹಿಳೆಯರನ್ನು ನಿಂದನೆ ಮಾಡಿದ್ದಾರೆಂದು ಆರೋಪಿಸಿ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ದೂರು ನೀಡಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್ ಭಾಷಣದ ಕೆಲವು ಉಲ್ಲೇಖಗಳು:
‘ಆಚೆ ಮನೆಯಲ್ಲಿ ಒಬ್ಬಳು ಬ್ಯಾರ್ದಿ ಇದ್ಳು, ಅವಳು ೬ನೆಯದ್ದು ಆಗಿ ೭ನೇ ಗರ್ಭಿಣಿಯಾಗಿದ್ದಳು. ಅವಳಿಗೆ ಯಾರಾದ್ರು ಕೇಳಿದ್ರಾ? ನೀನು ನಾಯಿ ಮರಿ ಹಾಕಿದ ಹಾಗೆ ಹಾಕ್ತಾ ಇದ್ದೀಯಾ ಅಂತ ಕೇಳಿದ್ರಾ? ಕೇಳುವ ದೈರ್ಯವೂ ಇಲ್ಲ. ಎರಡನೆಯದಾಗಿ ಅವರು ಹೇಳ್ತಾರೆ. ಅದು ಅಲ್ಲಾಹನಿಗೋಸ್ಕರ. ನಮ್ಮ ಮಕ್ಕಳು ಅಲ್ಲಾಹನಿಗೋಸ್ಕರ ಅನ್ನುತ್ತಾರೆ. ನೀವೇನಾದರೂ ಮಹಾಲಿಂಗೇಶ್ವರನಿಗಾಗಿ ಮಕ್ಕಳು ಮಾಡ್ತೀರಾ? ನಮ್ಮ ಜನಸಂಖ್ಯೆ ಜಾಸ್ತಿಯಾಗಬೇಕು.
ಮಂಗಳೂರು ವಿಧಾನಸಭಾ ಕ್ಷೇತ್ರ ಉಳ್ಳಾಲ ಅಂತ ಏನು ಹೇಳ್ತೀವಿ ಅಲ್ಲಿ ಹಿಂದೂ ಗೆಲ್ಲಲು ಸಾಧ್ಯವೇ ಇಲ್ಲ. ಅಲ್ಲಿ ಖಾದರೇ ಗೆಲ್ಲೋದು. ಯಾಕೆಂದರೆ ಒಂದು ಲಕ್ಷದ ಹತ್ತು ಸಾವಿರ ಬ್ಯಾರಿಗಳದ್ದೇ ಓಟು ಇದೆ. ಹಿಂದೂಗಳು 90 ಸಾವಿರ ಇರೋದು. ಗೆಲ್ಲೋದು ಯಾವಾಗ? ಅದು ಎಲ್ಲಾ ಕಡೆಗೂ ಹತ್ತಿರ ಹತ್ತಿರ ಬರ್ತಾ ಉಂಟು. ನಾವು ಗೆಲ್ತೇವಾ? ಗೆಲ್ಲಲು ಸಾಧ್ಯವೇ ಇಲ್ಲ. ನಮ್ಮನ್ನು ಸರ್ವನಾಶ ಮಾಡ್ತಾರೆ.
ಹಾಗಾಗಿ ನಮ್ಮ ಮನೆಯಲ್ಲಿ ೩ಕ್ಕಿಂತ ಕಡಿಮೆ ಮಕ್ಕಳು ಇರಬಾರದು ಎಂದು ಹೇಳಿಕೆ ನೀಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದ್ವೇಷ ಭಾಷಣ ತಡೆ ಸಂಬಂಧ ಸುಪ್ರಿಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳಂತೆ ಪೊಲೀಸರು ಈ ಪ್ರಕರಣವನ್ನು ಎಫ್‌ಐಆರ್ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ, ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಅವರು ಒತ್ತಾಯಿಸಿದ್ದಾರೆ.