ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ಕಲೆ, ಸಂಸ್ಕೃತಿ ಬೆಳವಣಿಗೆಗೆ ಕೆಲಸ ಮಾಡಿದೆ: ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ
ಬನಾರಿಯ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ನಡೆದ ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ೮೧ನೆಯ ವಾರ್ಷಿಕೋತ್ಸವ, ಕೀರಿಕ್ಕಾಡು ಸಂಸ್ಮರಣೆ ಹಾಗೂ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರಿಗೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.
ಪ್ರಶಸ್ತಿ ಸ್ವೀಕರಿಸಿ ಡಾ. ಎಂ. ಮೋಹನ ಆಳ್ವ ಮಾತನಾಡಿ, ‘ನಮ್ಮ ಸೌಂದರ್ಯ ಪ್ರಜ್ಞೆ, ಬದುಕಿನ ಮೌಲ್ಯಗಳು, ಕಲೆ ಸಂಸ್ಕೃತಿಗಳು ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಗ್ಗಿಸಿಕೊಂಡು ಔಟ್ ಡೇಟೆಡ್ ಆಗದೆ ಉಳಿಸುವುದು ಇಂದಿನ ದೊಡ್ಡ ಸವಾಲು ಎಂದು ಹೇಳಿದರು. ಈ ಬದಲಾವಣೆಗಳಿಂದ ಯಕ್ಷಗಾನಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಯಕ್ಷಗಾನ ಕಲೆ ಕಾಲಕ್ಕೆ ತಕ್ಕಂತೆ ದೊಡ್ಡ ಕ್ರಾಂತಿ ಆಗಿದೆ. ಯಕ್ಷಗಾನವು ಶಾಸ್ತ್ರೀಯ ಕಲೆಯಾಗಿ ಬೆಳೆಯಬೇಕು.ಆಗ ಅದಕ್ಕೆ ದೊಡ್ಡ ನ್ಯಾಯ ಸಿಕ್ಕಿದಂತಾಗುತ್ತದೆ. ಇದು ಕರ್ನಾಟಕದ ಕಲೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಮುಂಬೈ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ತಾಳ್ತಜೆ ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಮೋಹನ ಕುಂಟಾರ್ ಅಭಿನಂದನಾ ಭಾಷಣ ಮಾಡಿದರು. ಹಿರಿಯ ಪತ್ರಕರ್ತ ಎಸ್. ನಿತ್ಯಾನಂದ ಪಡ್ರೆ ಕೀರಿಕ್ಕಾಡು ವಿಷ್ಣು ಭಟ್ ಸಂಸ್ಮರಣಾ ಭಾಷಣ ಮಾಡಿದರು. ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಮುಖ್ಯ ಅತಿಥಿಯಾಗಿದ್ದರು.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಡಾ. ರಮಾನಂದ ಬನಾರಿ ಮಂಜೇಶ್ವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವಿಶ್ವವಿನೋದ ಬನಾರಿ ಸನ್ಮಾನ ಪತ್ರ ವಾಚಿಸಿದರು. ನಾರಾಯಣ ದೇಲಂಪಾಡಿ ವಂದಿಸಿದರು. ರಾಮಣ್ಣ ಮಾಸ್ತರ್ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.
