ಜ್ಞಾನ, ಕೌಶಲ್ಯ, ಜೀವನ ಮೌಲ್ಯ, ಧೋರಣೆಗಳನ್ನು ಮೈಗೂಡಿಸಿಕೊಳ್ಳಿ: ಶ್ರೀ ರಾಮಚರಣ್ ಅರವಿಂದ ದಾಸ ಸ್ವಾಮೀಜಿ
ಅವರು ಅ.25 ರಂದು ಉಜಿರೆ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ತಾಂತ್ರಿಕ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಆದರ್ಶವಾಗಿ ಅನುಸರಿಸಿ ನಿರ್ಧಿಷ್ಟ ಗುರಿ ಹೊಂದಿ ಲೋಕ ಪರಿವರ್ತನೆಗಾಗಿ ಜೀವನದಲ್ಲಿ ವಿಶೇಷ ಸಾಧನೆ ಮಾಡಿ ರಾಷ್ಟ್ರದಲ್ಲಿ ಪ್ರಕಾಶಮಾನರಾಗಿ ಬೆಳಗಿ ಕಲಿತ ಶಿಕ್ಷಣ ಸಂಸ್ಥೆ ಹಾಗೂ ವಿದ್ಯೆ ಕಲಿಸಿದ ಹೆತ್ತವರಿಗೆ ಎಂದೂ ವಿಧೇಯರಾಗಿ ಕೃತಜ್ಞರಾಗಿ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿ ಉಜ್ವಲ ಭವಿಷ್ಯ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೆತ್ತವರ ಕನಸನ್ನು ನನಸಾಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಸ್ವಂತಿಕೆಯಿಂದ ಸ್ವಾವಲಂಬಿ ಜೀವನ, ಯಶಸ್ವೀ ನಾಗರಿಕರಾಗಲು ಕಾಲೇಜಿನಲ್ಲಿ ಎಲ್ಲ ಅವಕಾಶಗಳಿವೆ. ಸಂಸ್ಥೆಯ ಮೂಲಭೂತ ಸೌಲಭ್ಯಗಳಿಂದ ಗುಣಮಟ್ಟದ ಶಿಕ್ಷಣ ಪಡೆದು ಶ್ರಮ, ಬದ್ಧತೆ, ತಪಸ್ಸಿನಂತೆ ಶಿಕ್ಷಣ ಪಡೆದು ಸರ್ವಾಂಗೀಣ ಅಭಿವೃದ್ಧಿಹೊಂದಿ, ವ್ಯಕ್ತಿತ್ವ ವಿಕಸನಗೊಂಡು ಸತ್ಪ್ರಜೆಗಳಾಗಿ ಕೀರ್ತಿ ತರುವವರಾಗಬೇಕು. ಶಿಕ್ಷಣ ಸಂಸ್ಥೆಗೆ ಸೇರ್ಪಡೆಗೊಂಡ ಅದೃಷ್ಟಶಾಲಿಗಳಾಗಿ ಚತುರ್ದಾನ ಪರಂಪರೆಯ ಕ್ಷೇತ್ರದ ಆಶ್ರಯದಲ್ಲಿ ಮೌಲ್ಯಯುತ ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳ ಆಪ್ತ ಡಾ. ಹರೀಶ್ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಡಾ. ಅಶೋಕ ಕುಮಾರ್ ಟಿ. ಸ್ವಾಗತಿಸಿ, ಪ್ರಸ್ತಾವಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಪ್ರಶಾಂತ ಶೆಟ್ಟಿ, ಡಾ. ವಿಶ್ವನಾಥ ಪಿ., ಡಾ. ಸೌಮ್ಯ, ಸಂತೋಷ್, ಎಸ್.ಎನ್. ಕಾಕತ್ಕರ್ ಉಪಸ್ಥಿತರಿದ್ದರು.
ಗಣಿತ ವಿಭಾಗ ಮುಖ್ಯಸ್ಥೆ ಡಾ. ವಿದ್ಯಾ ಮತ್ತು ಸಹಾಯಕ ಪ್ರೊಫೆಸರ್ ರಕ್ಷಿತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ. ರವೀಶ್ ಪಡುಮಲೆ ವಂದಿಸಿದರು. ತಾಂತ್ರಿಕ ಮಹಾವಿದ್ಯಾಲಯ ಪ್ರಥಮ ವರ್ಷದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಿದ್ದರು.