ಕಾರು ಢಿಕ್ಕಿಯಾಗಿ ಅಟೋ ಎಲೆಕ್ಟ್ರಿಕಲ್ ಉದ್ಯೋಗಿಯ ಮೃತ್ಯು
ಬಂಟ್ವಾಳ: ಅಟೋ ಎಲೆಕ್ಟ್ರಿಕಲ್ ಉದ್ಯೋಗಿಯೋರ್ವರು ಕೆಲಸದಲ್ಲಿ ನಿರತರಾಗಿದ್ದ ವೇಳೆ ಕಾರೊಂದು ಢಿಕ್ಕಿಯಾಗಿ ಮೃತಪಟ್ಟ ಘಟನೆ ಬಿ.ಸಿ. ರೋಡಿಗೆ ಸಮೀಪದ ಗಾಣದಪಡ್ಪು ಎಂಬಲ್ಲಿ ಮಂಗಳವಾರ ನಡೆದಿದೆ.
ಮೃತಪಟ್ಟ ಅಟೋ ಎಲೆಕ್ಟ್ರಿಕಲ್ ಉದ್ಯೋಗಿಯನ್ನು ಬಂಟ್ವಾಳ ತಾ.ನ ಬೋಳಂತೂರು ನಿವಾಸಿ ಜಬ್ಬಾರ್ (33) ಎಂದು ಗುರುತಿಸಲಾಗಿದೆ.
ಬಿ.ಸಿ.ರೋಡಿಗೆ ಸಮೀಪದ ಗಾಣದಪಡ್ಪುವಿನಲ್ಲಿರುವ ಶಿವಗಣೇಶ್ ಬ್ಯಾಟರಿ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದು, ಹೆದ್ದಾರಿಯ ಬದಿಯಲ್ಲಿ ನಿಂತು ಕಾರೊಂದಕ್ಕೆ ಹಾರ್ನ್ ಅಳವಡಿಸುತ್ತಿದ್ದ ವೇಳೆ ವೇಣೂರು ಕಡೆಯಿಂದ ಬಂಟ್ವಾಳ ಬೈಪಾಸ್ ರಸ್ತೆಯಾಗಿ ಅತೀ ವೇಗ ಹಾಗೂ ಅಜಾಗರುಕತೆಯಿಂದ ಧಾವಿಸಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ.
ಇದರ ಪರಿಣಾಮ ಗಂಭೀರ ಸ್ವರೂಪದ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.