ಧರ್ಮಸ್ಥಳ ಪ್ರಕರಣ: ಮತ್ತೆ ಚಿನ್ನಯ್ಯನ ಹೇಳಿಕೆ ಪಡೆಯಲು ಎಸ್‌ಐಟಿ ಸಿದ್ಧತೆ
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಇದೀಗ ಆರೋಪಿಯಾಗಿ ಜೈಲಿನಲ್ಲಿರುವ ಚಿನ್ನಯ್ಯನ ಹೇಳಿಕೆಯನ್ನು ಮತ್ತೆ ದಾಖಲಿಸುವ ಕಾರ್ಯಕ್ಕೆ ಎಸ್‌ಐಟಿ ಮುಂದಾಗಿರುವುದಾಗಿ ತಿಳಿದು ಬಂದಿದೆ.
ಚಿನ್ನಯ್ಯ ಇತ್ತೀಚೆಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆಯಲ್ಲಿ ತಾನು ಪೊಲೀಸರ ಸಮ್ಮುಖದಲ್ಲಿ ಹತ್ತಕ್ಕೂ ಹೆಚ್ಚು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಹೇಳಿದ್ದಾನೆ ಎಂಬ ಮಾಹಿತಿಗಳು ಹೊರಬರುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಆತನ ಹೇಳಿಕೆ ದಾಖಲಿಸುವ ಕಾರ್ಯವನ್ನು ಮತ್ತೆ ನಡೆಸಲು ಎಸ್‌ಐಟಿ ಮುಂದಾಗಿದೆ ಎಂದುತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಅದಲ್ಲದೇ, ಚಿನ್ನಯ್ಯನ ಪತ್ನಿ ಹಾಗೂ ಆತನ ಸಹೋದರಿ ಸೇರಿದಂತೆ ಹಲವರ ಹೇಳಿಕೆಗಳನ್ನು ಎಸ್‌ಐಟಿ ಪಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಚಿನ್ನಯ್ಯನ ಹೇಳಿಕೆ ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಮತ್ತೆ ಚಿನ್ನಯ್ಯನ ಹೇಳಿಕೆ ದಾಖಲಿಸಲು ಎಸ್‌ಐಟಿಗೆ ನ್ಯಾಯಾಲಯದ ಅನುಮತಿ ಅಗತ್ಯವಿದೆ. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದ್ದು, ಒಂದೆರಡು ದಿನಗಳಲ್ಲಿ ಅನುಮತಿ ಪಡೆದು ಚಿನ್ನಯ್ಯನ ಹೇಳಿಕೆ ದಾಖಲಿಸುವ ಕಾರ್ಯ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಚಿನ್ನಯ್ಯ ನೀಡಿರುವ ಹೇಳಿಕೆಗಳು ಒಂದಕ್ಕೊಂದು ತಾಳೆಯಾಗದಿರುವ ಬಗ್ಗೆಯೂ ಮಾಹಿತಿಗಳಿವೆ. ಈ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಎಸ್‌ಐಟಿ ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.