ಪಂಜೆ ಮಂಗೇಶರಾಯರು ಹಾಗೂ ಕೃತಿಗಳ ಅವಲೋಕನ
ವಿಶ್ರಾಂತ ಪ್ರಾಧ್ಯಾಪಕ ಡಾ. ವರದರಾಜ್ ಚಂದ್ರಗಿರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಕನ್ನಡ ಸಾಹಿತ್ಯಕ್ಕೆ ಪಂಜೆಯವರ ಅಮೂಲ್ಯ ಕೊಡುಗೆಯನ್ನು ವಿಸ್ತಾರವಾಗಿ ಪ್ರತಿಪಾದಿಸಿದರು. ಬಹುಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡ ತನ್ನ ಸೌಗಂಧವನ್ನು ಬೀರಲು ಪಂಜೆ ಮಂಗೇಶರಾಯರು ಮಂಜೇಶ್ವರ ಗೋವಿಂದ ಪೈ ಹಾಗೂ ಮುಳಿಯ ತಿಮ್ಮಪ್ಪಯ್ಯನವರು ಮೂಲ ಕಾರಣ ಎಂದು ಶ್ಲಾಘಿಸಿದರು ಅವರು ಬರೆದ ಮಕ್ಕಳ ಪದ್ಯಗಳು ಶಾಲಾ ಪಠ್ಯ ಪುಸ್ತಕಗಳಲ್ಲಿ ಇಂದಿಗೂ ಜನಮನದಲ್ಲಿ ಗಟ್ಟಿಯಾಗಿ ಉಳಿದಿದೆ ಎಂದರು.
ಪೊಂಪೈ ಶಾಲೆಯ ನಿವೃತ್ತ ಶಿಕ್ಷಕಿ ಸಾಮಾಜಿಕ ಚಿಂತಕಿ ಕೆ.ಎ. ರೋಹಿಣಿ ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಉಳಿಸುವ ಹಾಗೂ ಬೆಳೆಸುವ ಕಾರ್ಯ ಮನೆಯಂಗಳದಿಂದಲೇ ಪ್ರಾರಂಭವಾಗಬೇಕು. ಈ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಇಂತಹ ಕಾರ್ಯಕ್ರಮಗಳು ಮಹತ್ವ ಪೂರ್ಣವಾಗಿದೆ ಎಂದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆಯಂಗಳದಲ್ಲಿ ಸಾಹಿತ್ಯ ಎಂಬ ಕಾರ್ಯಕ್ರಮದ ಇಂದಿನ ಅವಶ್ಯಕತೆಯನ್ನು ತಿಳಿಸಿದರು ಹಾಗೂ ಪಂಜೆಯವರ ಸಾಹಿತ್ಯ ಪ್ರೇಮವನ್ನು ಪ್ರಶಂಸಿಸಿದರು.
ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ, ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ್, ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ಅಮೃತ ಪ್ರಕಾಶ ಮಾಸಪತ್ರಿಕೆ ಸಂಪಾದಕಿ ಡಾ. ಮಾಲತಿ ಶೆಟ್ಟ ಮಾಣೂರು, ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕಿನ ಅಧ್ಯಕ್ಷ ರಾದ ಡಾ. ಮಂಜುನಾಥ್ ರೇವಣ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧೀಕ್ಷಕ ಕೆ.ಎನ್. ನಾಗರಾಜ್ ಶೇಟ್, ಇಂಜಿನಿಯರ್ ಮಂಜುನಾಥ್ ಶೇಟ್ ಸಹಕರಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ರತ್ನಾವತಿ ಜೆ. ಬೈಕಾಡಿ ಅವರು ಆಶಯ ಗೀತೆ ಹಾಡಿದರು.
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ವಿಷಯದಲ್ಲಿ ಕವಯಿತ್ರಿಯರಾದ ಸುಧಾ ನಾಗೇಶ್ ನಳಿನಿ ಪೈ, ವಿದ್ಯಾ ಗಣೇಶ್, ಆಕೃತಿ ಐ.ಎಸ್. ಭಟ್ ಹಾಗೂ ಸುಬ್ರಾಯ ಭಟ್ ಮುಂತಾದ ಕವಿಗಳು ಸ್ವರಚಿತ ಕವನ ವಾಚಿಸಿದರು. ಹಿರಿಯ ಕವಯಿತ್ರಿ ಸತ್ಯವತಿ ಭಟ್ ಕೊಳಚಪ್ಪು ಗೋಷ್ಠಿಯ ಅಧ್ಯಕ್ಷತೆ ವಹಿಸಿ ತನ್ನ ಸ್ವರಚಿತ ಕವನವನ್ನು ವಾಚಿಸಿದರು.
ಡಾ. ಅರುಣಾ ನಾಗರಾಜ್ ಸ್ವಾಗತಿಸಿ, ನಿರೂಪಿಸಿದರು. ಇಂಜಿನಿಯರ್ ಸಿಂಧೂ ಮಂಜುನಾಥ್ ವಂದಿಸಿದರು. ಇದೇ ಸಂದರ್ಭ ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಖಾಲಿದ್ ಉಜಿರೆ ಕನ್ನಡ ಗೀತೆಯನ್ನು ಹಾಡಿದರು.