ಸ್ವಾವಲಂಬನೆಯ ಬದುಕಿಗೆ ಖಾದಿ ಉದ್ಯಮ ಪೂರಕ: ಶಾಸಕ ಕಾಮತ್
Wednesday, October 15, 2025
ಮಂಗಳೂರು: ಸ್ವಾವಲಂಬನೆಯ ಬದುಕಿಗೆ ಖಾದಿ ಉದ್ಯಮ ಪೂರಕವಾಗಿದೆ. ಕಾದಿ ಖರೀದಿಯತ್ತ ಜನತೆ ಒಲವು ತೋರಬೇಕು. ಮಂಗಳೂರಿನಲ್ಲಿಯೂ ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಖಾದಿ ಉದ್ಯಮದ ಎರಡು ಘಟಕಗಳನ್ನು ಆರಂಭಿಸುವ ಯೋಚನೆ ಇದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ 10 ದಿನಗಳ ಕಾಲ ಮಂಗಳೂರಿನಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಖಾದಿ ರಾಜ್ಯದ ಮನೆ ಮನೆಗಳಿಗೆ ತಲುಪಬೇಕು. ಎಲ್ಲರೂ ಖಾದಿ ಉತ್ಪನ್ನಗಳತ್ತ ಆಕರ್ಷಿತರಾಗುವ ಮೂಲಕ ಉದ್ಯಮವನ್ನು ಬೆಳೆಸಬೇಕು. ಮಂಗಳೂರಿನಲ್ಲಿ ಖಾದಿ ಉದ್ಯಮದ ಘಟಕ ಆರಂಭಗೊಂಡರೆ ಈ ಭಾಗದ ಖಾದಿಪ್ರಿಯರಿಗೆ ಅನುಕೂಲವಾಗಲಿದೆ ಎಂದರು.
ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಇಂದಿನ ಫ್ಯಾಷನ್‌ಗೆ ಪೂರಕವಾಗಿ ಖಾದಿ ಉತ್ಪನ್ನಗಳು ಬರಬೇಕು. ಇದು ಸಾಧ್ಯವಾದಲ್ಲಿ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗುತ್ತದೆ. ಪ್ರಧಾನಿಯವರ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಪರಿಕಲ್ಪನೆ ಕೂಡ ಇಂದು ಹೆಚ್ಚು ಜನರನ್ನು ತಲುಪಿತ್ತಿದೆ ಎಂದವರು ಹೇಳಿದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ತುರ್ವಿಹಾಳ್ ಮಾತನಾಡಿ, ರಾಜ್ಯದಲ್ಲಿ ಖಾದಿ ಉದ್ಯಮವನ್ನು ಬೆಳೆಸಲು ವಿಶೇಷ ಒತ್ತು ನೀಡಲಾಗಿದೆ. ಇದರಿಂದ ಸಾಕಷ್ಟು ಉದ್ಯೋಗವಕಾಶವೂ ಸೃಷ್ಟಿಯಾಗಲಿದೆ ಎಂದರು.
ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಡಿ.ಬಿ. ನಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಗ್ರಾಮೋದ್ಯೋಗ ಅಧಿಕಾರಿ ಆರ್. ಯೋಗೇಶ್ ಉಪಸ್ಥಿತರಿದ್ದರು. ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಜಿತ್ ವಂದಿಸಿ, ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

