ಪಜಿರಡ್ಕ ಪರಿಸರದಲ್ಲಿ ಮತ್ತೆ ಮೊಸಳೆ ಓಡಾಟ

ಪಜಿರಡ್ಕ ಪರಿಸರದಲ್ಲಿ ಮತ್ತೆ ಮೊಸಳೆ ಓಡಾಟ


ಕಲ್ಮಂಜ: ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಪರಿಸರದಲ್ಲಿ ಮತ್ತೆ ಮೊಸಳೆ ಕಂಡು ಬಂದಿದೆ.

ಭಾನುವಾರ ಬೆಳಗ್ಗೆ ವೇಳೆ ಇಲ್ಲಿನ ನೇತ್ರಾವತಿ ನದಿಯಲ್ಲಿ ಕಂಡುಬಂದಿದ್ದ ಮೊಸಳೆ ಮಧ್ಯಾಹ್ನದವರೆಗೂ ಅಲ್ಲೇ ಇದ್ದು ಬಳಿಕ ನದಿಗೆ ಇಳಿದಿತ್ತು. 

ಸೋಮವಾರ ಹಗಲಿನಲ್ಲಿ ಕಂಡುಬರದ ಮೊಸಳೆ ರಾತ್ರಿ ದೇವಸ್ಥಾನದಿಂದ 100 ಮೀ. ದೂರದಲ್ಲಿರುವ ಕಿರು ಸೇತುವೆ ಪರಿಸರದಲ್ಲಿ ಓಡಾಟ ನಡೆಸುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಗ್ರಾಮದ ಇನ್ನೊಂದು ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಿಂಡಿ ಅಣೆಕಟ್ಟು ಸಹಿತ ಕಿರುಸೇತುವೆಯ ಮೇಲೆ ಓಡಾಟ ನಡೆಸುತ್ತಿದ್ದ ಮೊಸಳೆ ಬಳಿಕ ಕಿಂಡಿ ಅಣೆಕಟ್ಟಿನ ಭಾಗದಲ್ಲಿ ನದಿಗೆ ಇಳಿದಿದೆ. ಮೊಸಳೆ ಕಿರುಸೇತುವೆ ಮೇಲೆ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಚಿತ್ರಿಕರಿಸಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ನದಿಯಲ್ಲಿ ಹೆಚ್ಚಿನ ನೀರು ಆಗಾಗ ಹರಿದು ಬರುತ್ತಿದೆ. ಈ ವೇಳೆ ಮೊಸಳೆ ಮೃತ್ಯುಂಜಯ ನದಿ ಹರಿಯುವ ಚಾರ್ಮಾಡಿ ಭಾಗದಿಂದ ಅಥವಾ ನೇತ್ರಾವತಿ ನದಿ ಹರಿಯುವ ದಿಡುಪೆ ಭಾಗದಿಂದ ಬಂದಿರುವ ಶಂಕೆ ವ್ಯಕ್ತವಾಗಿದೆ. ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳು ಪಜಿರಡ್ಕದಲಲ್ಲಿ ಸಂಗಮಗೊಳ್ಳುತ್ತವೆ. ಈ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ದೇವರ ಮೀನುಗಳು ಇವೆ. ನದಿಗಳು ಸಂಗಮಗೊಳ್ಳುವ ಸ್ಥಳಕ್ಕಿಂತ ಮೇಲ್ಭಾಗದ ಕುಡೆಂಚಿ,ಫಲಸ್ತಡ್ಕ ಮೊದಲಾದ ಪ್ರದೇಶಗಳಲ್ಲಿ ನಾಲ್ಕೈದು ದಿನದ ಹಿಂದೆ ಮೊಸಳೆ ಕಂಡುಬಂದಿರುವ ಕುರಿತು ಸ್ಥಳೀಯ ಕೆಲವರು ತಿಳಿಸಿದ್ದಾರೆ.

ಅಪಾಯ:

ಪಜಿರಡ್ಕ ಪ್ರದೇಶದಲ್ಲಿ ಹೆಚ್ಚಿನ ಜನರ ಓಡಾಟವಿದೆ. ಇಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯು ಈ ಭಾಗದ ಜನರಿಗೆ ಆಸರೆಯಾಗಿದೆ. ಇಲ್ಲಿನ ನದಿ ಪರಿಸರದಲ್ಲಿ ಕೃಷಿಕರು, ಹೈನುಗಾರರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಾರೆ. ನದಿಯ ದಡದ ಸಮೀಪ ಕೃಷಿ ತೋಟಗಳು, ಮನೆಗಳು ಇವೆ. ಇಲ್ಲಿ ಮೊಸಳೆ ಓಡಾಟ ನಡೆಸುತ್ತಿರುವುದು ಸ್ಥಳೀಯರ ಆತಂಕವನ್ನು ಹೆಚ್ಚಿಸಿದೆ. ಜನ ಓಡಾಟ ಪ್ರದೇಶದಲ್ಲಿ ಮೊಸಳೆ ಕಂಡು ಬರುತ್ತಿರುವುದು ಅಪಾಯಕಾರಿಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article