ಸಣ್ಣ ಅತಿಯಾಸೆಗೆ ಬಲಿಯಾಯಿತು ಕಣ್ಣು

ಸಣ್ಣ ಅತಿಯಾಸೆಗೆ ಬಲಿಯಾಯಿತು ಕಣ್ಣು


ಆಗ 4ನೇ ತರಗತಿಯಲ್ಲಿದ್ದೆ. ಅಣ್ಣ ಯಾವಾಗಲೂ ಕನ್ನಡಕ ಹಾಕುವುದನ್ನು ನೋಡಿ ನನಗೂ ಒಂದು ಕನ್ನಡಕ ಬೇಕೆಂಬ ಆಸೆ ಹುಟ್ಟಿತು. ಒಂದು ದಿವಸ ಅಣ್ಣ ಕನ್ನಡಕ ಬಿಚ್ಚಿಟ್ಟು ಸ್ನಾನಕ್ಕೆ ತೆರಳಿದ್ದರು. ಅವನ ಕನ್ನಡಕ ಹಾಕಿಕೊಂಡು ಆಸೆ ತೀರಿಸಿಕೊಂಡಿದ್ದೆ. ಅಂದಿನಿಂದ ಅವನು ಬಿಟ್ಟು ಹೋದಾಗಲೆಲ್ಲಾ ಅವನ ಕನ್ನಡಕ ಹಾಕಿಕೊಳ್ಳುವುದು ಅಭ್ಯಾಸವಾಗಿ ಹೋಯಿತು. ತುಂಬಾ ದಿನಗಳವರೆಗೆ ಇದು ಮುಂದುವರೆಯಿತು. ದಿನಕಳೆದಂತೆ ಅದೇಕೋ ಗೊತ್ತಿಲ್ಲ ಕನ್ನಡಕ ಹಾಕಿಕೊಳ್ಳಬೇಕೆಂಬ ಆಸೆ ಕಣ್ಮರೆಯಾಯಿತು. 

ಒಂದು ದಿನ ಶಾಲೆಯಲ್ಲಿ ಶಿಕ್ಷಕರು ಬೋರ್ಡ್ ಮೇಲೆ ಅದೇನೋ ಬರೆಯುತ್ತಿದ್ದರು. ಅದು ನನಗೆ ಕಾಣುತ್ತಲೇ ಇರಲಿಲ್ಲ. ಆಗ ಆದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದು ಪದೆ ಪದೇ ಅನುಭವಕ್ಕೆ ಬರಲಾರಂಭಿಸಿತು. ಈ ಮಾತನ್ನು ಮನೆಯವರ ಬಳಿ ಹೇಳುವ ಧೈರ್ಯ ಇರಲಿಲ್ಲ. ಎಲ್ಲಿ ಬಯ್ದು ಬಿಡುತ್ತಾರೋ ಒಂಬ ಭಯವೂ ಒಂದೆಡೆ ಇತ್ತು. ಇದೇ ಆತಂಕದಲ್ಲಿ 4ನೇ ತರಗತಿ ಮುಗಿಯಿತು. 

ಮಂದಿನ ತರಗತಿಗೆ ಹೋದಾಗಲೂ ಇದೇ ಅನುಭವ ಮುಂದುವರೆಯಿತು. ಕೊನೆಗೊಂದು ದಿನ ಗೆಳೆಯರಲ್ಲಿ ಇದನ್ನು ಹಂಚಿಕೊಂಡೆ. ಮೊದಲು ಸುಳ್ಳು ಹೇಳುತ್ತಿದ್ದೇನೆಂದೇ ತಿಳಿದಿದ್ದರು. ಶಾಲೆಯಲ್ಲಿ ಪಕ್ಕದಲ್ಲಿ ಕೂರುತ್ತಿದ್ದ ಗೆಳತಿಯ ಪುಸ್ತಕ ನೋಡಿ ಬರೆಯುವ ಅಭ್ಯಾಸ ಮಾಡಿಕೊಂಡಿದ್ದೆ. ಕೊನೆಗೊಂದು ದಿನ ಈ ವಿಷಯವು ಟೀಚರ್ವರೆಗೆ ತಲುಪಿತು. ಸ್ವಲ್ಪ ದಿನದ ನಂತರ ಅಕ್ಕ ಬಳಿ ಹೇಳಿದೆ. ಆಕೆ ಈ ವಿಷಯವನ್ನು ಮನೆಯಲ್ಲಿ ತಿಳಿಸಿದ ನಂತರ ಡಾಕ್ಟರ್ ಬಳಿ ಪರೀಕ್ಷೆ ಮಾಡಿಸಲಾಯಿತು. 

ಅಂದಿನಿಂದ ನನಗೂ ಶಾಶ್ವತವಾದ ಕನ್ನಡಕ ಸಿಕ್ಕಿತು. ನನ್ನ ಅತಿ ಆಸೆಯಿಂದ ಅಣ್ಣನ ಕನ್ನಡಕ ಹಾಕಿಕೊಳ್ಳುತ್ತಿದ್ದರಿಂದಲೇ ಈ ಪರಿಸ್ಥಿತಿಗೆ ಬಂದಿದ್ದೇನೆ ಎಂಬುದು ಖಾತ್ರಿಯಾಯಿತು. 

ನಾನು ಕನ್ನಡಕ ಹಾಕುವುದನ್ನು ನೋಡಿ ಗೆಳೆತಿಯರೂ ತಾವೂ ಹಾಕಬೇಕೆಂದು ಬಯಸುತ್ತಿದ್ದರು. ಆದರೆ ನನಗಾದ ಅನುಭವ ಮತ್ತೊಬ್ಬರಿಗೆ ಆಗಬಾರದು ಎಂಬ ಕಾರಣದಿಂದ ಬೇರೆ ಯಾರಿಗೂ ನನ್ನ ಕನ್ನಡಕ ಕೊಡುತ್ತಿರಲಿಲ್ಲ. ಕೆಲವೊಮ್ಮೆ ಮೂರ್ಖತನದ ಆಲೋಚನೆ ನಮ್ಮನ್ನು ಶಾಶ್ವತವಾದ ತೊಂದರೆಗೆ ಸಿಲುಕಿಸುತ್ತದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಯಿತು.


- ಜಯಶ್ರೀ 

ವಿಶ್ವವಿದ್ಯಾನಿಲಯ ಕಾಲೇಜು 

ಮಂಗಳೂರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article