ಗ್ಯಾಂಗ್‌ವಾರ್: ಕತ್ತಿನಲ್ಲಿ ಸಿಕ್ಕಿಕೊಂಡ ಚೂರಿ
ಕಾಸರಗೋಡು: ಕುಂಬಳೆ ಠಾಣೆ ವ್ಯಾಪ್ತಿಯ ಸೀತಾಂಗೋಳಿ ಎಂಬಲ್ಲಿ ಭಾನುವಾರ ತಡರಾತ್ರಿ ಎರಡು ತಂಡಗಳ ಮಧ್ಯೆ ಗ್ಯಾಂಗ್ ವಾರ್ ನಡೆದಿದ್ದು ಈ ವೇಳೆ ಯುವಕನೊಬ್ಬನ ಕುತ್ತಿಗೆಯ ಭಾಗಕ್ಕೆ ಚೂರಿಯಿಂದ ಇರಿದು ಅಲ್ಲಿಯೇ ಸಿಕ್ಕಿಕೊಂಡ ಘಟನೆ ನಡೆದಿದೆ. ಗ್ಯಾಂಗ್ ವಾರ್ ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.
ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ ಹಣದ ವಿಚಾರದಲ್ಲಿ ಬದಿಯಡ್ಕ ಮತ್ತು ಸೀತಾಂಗೋಳಿಯ ಎರಡು ತಂಡಗಳ ಮಧ್ಯೆ ಹೊಡೆದಾಟ, ಚೂರಿ ಹಿಡಿದು ಬೀದಿ ಕಾಳಗ ನಡೆದಿದೆ. ಕಾರು, ಜೀಪಿನಲ್ಲಿ ಬಂದಿದ್ದ ಬದಿಯಡ್ಕದ ತಂಡವೊಂದು ರಸ್ತೆಯಲ್ಲಿ ನಿಂತಿದ್ದ ಜನರ ಮೇಲೆ ಕಾರು ಹಾಯಿಸಲು ಯತ್ನಿಸಿದೆ. ಗಲಾಟೆ ಮಧ್ಯೆ ಬದಿಯಡ್ಕ ನಿವಾಸಿ ಅನಿಲ್ ಕುಮಾರ್ ಎಂಬಾತನ ಕುತ್ತಿಗೆಗೆ ಚಾಕು ಇರಿಯಲಾಗಿದೆ. ಚಾಕು ಹಾಕಿದಾಗಲೇ ಪೊಲೀಸ್ ಜೀಪು ಬಂದಿದ್ದು ಚಾಕುವನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕುತ್ತಿಗೆಯಲ್ಲಿ ಚಾಕು ಸಿಕ್ಕಿಕೊಂಡಿರುವ ಫೋಟೊ ವೈರಲ್ ಆಗಿದ್ದು ಭಯಾನಕ ದೃಶ್ಯಕ್ಕೆ ಸಾಕ್ಷಿಯಾಗಿದೆ. ಇರಿತಕ್ಕೊಳಗಾದ ಅನಿಲ್ ಕುಮಾರ್ ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಿಲ್ ಕುಮಾರ್ ಬದಿಯಡ್ಕದಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಇರಿತದಿಂದ ಗಂಭೀರ ಗಾಯಗೊಂಡು ರಕ್ತದ ಓಕುಳಿಯಲ್ಲಿ ನೆಲಕ್ಕೆ ಬೀಳುವ ದೃಶ್ಯವೂ ಮೊಬೈಲಿನಲ್ಲಿ ಸೆರೆಯಾಗಿದೆ. ಚೂರಿ ಇರಿತ ಮಾಡುತ್ತಿದ್ದಾಗಲೇ ಅಲ್ಲಿಯೇ ಇನ್ನೊಬ್ಬ ವಿಡಿಯೋ ಮಾಡಿರುವುದು ಕಂಡುಬರುತ್ತದೆ. ಘಟನೆಗೆ ಸಂಬಂಧಿಸಿದಂತೆ ಕುಂಬಳೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಕೃತ್ಯಕ್ಕೆ ಬಳಸಿದ ಎರಡು ವಾಹನವನ್ನು ವಶಕ್ಕೆ ಪಡೆದಿದ್ದಾರೆ.