‘ಬಾಲ್ಯದಲ್ಲಿ ಕಾರಂತರ ಮೇಲೆ ಗಾಂಧಿ ತತ್ವವು ಮಹತ್ವದ ಪ್ರಭಾವವನ್ನು ಬೀರಿತ್ತು’: ಪ್ರೊ. ಬಿ.ಎ. ವಿವೇಕ ರೈ
ಅವರು ಮಂಗಳೂರು ವಿವಿ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನೂತನ ಸಭಾಂಗಣದ ಉದ್ಘಾಟನೆ ಮತ್ತು ಡಾ.ಕೆ.ಶಿವರಾಮ ಕಾರಂತ ಜನ್ಮದಿನಾಚರಣೆ ’ಕಾರಂತರ ನೆನಪು’ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಿವರಾಮ ಕಾರಂತರ ಪುಸ್ತಕ ಓದುವಿಕೆ, ಪ್ರವಾಸ, ಸೂಕ್ಷ್ಮಗ್ರಹಣ ಶಕ್ತಿಗಳು ಅವರನ್ನು ಎತ್ತರಕ್ಕೆ ಏರಿಸಿತ್ತು. ಅವರ ಅನುಭವಗಳು ನಮಗೆಲ್ಲರಿಗೂ ದಾರಿ ದೀಪವಾಗಿವೆ. ಶಿಕ್ಷಣ ಸಂಸ್ಥೆಗಳು ಎಂದಿಗೂ ಗೋಡೆಗಳಾಗದೆ ವಿಸ್ತಾರತೆ ಯೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ .ಧರ್ಮ, ಕನ್ನಡ ವಿಭಾಗದ ಆರಂಭದಿಂದ ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ ಅನೇಕ ರೀತಿಯ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಪ್ರೊ.ವಿವೇಕ್ ರೈ ಅವರ ಹೆಸರು ಶಾಶ್ವತವಾಗಿರಬೇಕು ಎಂಬ ಈ ನಿಟ್ಟಿನಲ್ಲಿ ಈ ನೂತನ ಸಭಾಂಗಣಕ್ಕೆ ’ವಿವೇಕ ರೈ ವಿಚಾರ ವೇದಿಕೆ’ ಎಂದು ಹೆಸರಿಡಲಾಗುವುದು ಎಂದು ಘೋಷಿಸಿದರು. ಹಾಗೆಯೇ ಈ ವೇದಿಕೆಯು ಎಲ್ಲಾ ರೀತಿಯ ಕಾರ್ಯಕ್ರಮ, ವಿಚಾರಗಳಿಗೆ ವೇದಿಕೆಯಾಗಲಿದೆ ಎಂದರು.
ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ನಾಗಪ್ಪ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿವರಾಮ ಕಾರಂತರು ಬದುಕಿದ ರೀತಿ, ನಡೆದ ದಾರಿ ವಿಭಿನ್ನವಾದುದು ಮತ್ತು ಸಾಹಿತ್ಯಾಸಕ್ತರಿಗೆ ಪ್ರೇರಣದಾಯಕ ರಾಗಿದ್ದಾರೆ. ಅವರ ಜನ್ಮದಿನದಂದೇ ನೂತನ ಸಭಾಂಗಣ ಉದ್ಘಾಟನೆಗೊಂಡಿರುವುದು ಸಂತಸದ ಕ್ಷಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ಪ್ರೊ. ಕೆ.ಚಿನ್ನಪ್ಪ ಗೌಡ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶಿವರಾಮ ಶೆಟ್ಟಿ, ಹಿರಿಯರಾದ ಡಾ.ಭಾಸ್ಕರ ರೈ ಕುಕ್ಕುವಳ್ಳಿ, ರವೀಂದ್ರ ರೈ ಕಲ್ಲಿಮಾರ್, ವಾಸುದೇವ ಉಚ್ಷಿಲ, ಪ್ರಾಧ್ಯಾಪಕ ರಾದ ಪ್ರೊ.ಸೋಮಣ್ಣ, ಡಾ.ಪ್ರಕಾಶ್ಚಂದ್ರ ಶಿಶಿಲ, ಇಸ್ಮಾಯಿಲ್, ಮಂಗಳೂರು ವಿವಿ ಇಂಜಿನಿಯರ್ ಸಂತೋಷ್ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಹಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ವಂದಿಸಿದರು. ಡಾ.ಯಶುಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.