ರಸ್ತೆ ಬದಿಗೆ ಕಸ ಎಸೆದವರ ಪತ್ತೆ: ಅವರಿಂದಲೇ ಸ್ವಚ್ಚ ಮಾಡಿಸಿದ ಪಂಚಾಯತ್
Saturday, October 18, 2025
ಕುಂದಾಪುರ: ಕೋಟೇಶ್ವರ ಸಮೀಪದ ಕಾಳಾವರ ಗ್ರಾಮದಲ್ಲಿನ ಕೋಟೇಶ್ವರ-ಹಾಲಾಡಿ ರಸ್ತೆಯಲ್ಲಿ ರೈಲ್ವೆ ಸೇತುವೆ ಮೇಲ್ಗಡೆ ಇಕ್ಕೆಲದಲ್ಲಿ ಕಸ ಬಿಸಾಡಿದ ವ್ಯಕ್ತಿಗಳನ್ನು ಪತ್ತೆ ಮಾಡಿ ಅವರಿಂದಲೇ ಸ್ವಚ್ಚ ಮಾಡಿಸಿದ ಘಟನೆ ನಡೆದಿದೆ.
ಈ ಪ್ರದೇಶದಲ್ಲಿ ಯಾವಾಗಲೂ ಕಸದ ಚೀಲಗಳು ಕಂಡುಬರುತ್ತಿದ್ದು, ಗ್ರಾಮಸ್ಥರು ಕಾಳಾವರ ಪಂಚಾಯತ್‌ಗೆ ದೂರು ಸಲ್ಲಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಈ ಬಗ್ಗೆ ಕ್ರಮ ಕೈಗೊಂಡು ಕಸ ಎಸೆಯುವವರನ್ನು ಪತ್ತೆ ಮಾಡಲಾಯಿತು.
ಕಸ ಬಿಸಾಡಿದ ವ್ಯಕ್ತಿಯನ್ನು ಪಂಚಾಯತ್ ಕಚೇರಿಗೆ ಕರೆಸಿ, ಅವರಿಗೆ ದಂಡ ವಿಧಿಸಿ, ಅದೇ ಕಸವನ್ನು ಸಂಜೆ ಅವರಿಂದಲೇ ಸ್ವಚ್ಛಗೊಳಿಸಲಾಯಿತು.
ಪಂಚಾಯತ್ ನವರ ಈ ಕ್ರಮ ಸರ್ವತ್ರ ಶ್ಲಾಘನೆಗೆ ಒಳಗಾಗಿದೆ. ಗ್ರಾಮಸ್ಥರಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ.
ಪತ್ತೆಗೆ ಸಹಕರಿಸಿದ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರಿಗೆ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಬಿಸಾಡುವವರು ಅಂತಹ ಹವ್ಯಾಸ ಬಿಡಬೇಕು, ಇಲ್ಲವಾದರೆ ಪಂಚಾಯತ್ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.