ಸಾಲಿಗ್ರಾಮ ಘನ ತ್ಯಾಜ್ಯ ಘಟಕ ಉದ್ಘಾಟನೆ ವಿರೋಧಿಸಿ ಪ್ರತಿಭಟನೆ
Saturday, October 25, 2025
ಕುಂದಾಪುರ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿಯಲ್ಲಿ ಘನ ತ್ಯಾಜ್ಯ ಘಟಕ ಮತ್ತು ಎಮ್‌ಆರ್‌ಎಫ್ ಘಟಕಗಳ ಉದ್ಘಾಟನೆ ಅ.25 ರಂದು ನೆರವೇರಿತು. ಈ ಸಂದರ್ಭ ಘಟಕ ಉದ್ಘಾಟನೆ ವಿರೋಧಿಸಿ ಸ್ಥಳೀಯರು ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಕಪ್ಪು ಪಟ್ಟಿ ಧರಿಸಿ ಘಟಕದ ಸಮೀಪ ಪ್ರತಿಭಟನೆ ನಡೆಸಿದರು.
ಘಟಕದಿಂದ ಸ್ಥಳೀಯರಿಗೆ ಸಮಸ್ಯೆಯಾಗಲಿದ್ದು ಪರಿಸರಕ್ಕೆ ಹಾನಿಯಾಗಲಿದೆ ಹಾಗೂ ಸಿ.ಆರ್.ಝಡ್. ಅನುಮತಿ ಇದುವರೆಗೆ ಸಿಕ್ಕಿಲ್ಲ. ಲೋಕಾಯುಕ್ತದಲ್ಲಿ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದೆ. ಸ್ಥಳೀಯರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ ಉದ್ಘಾಟನೆ ನಡೆಸಿರುವುದು ಕಾನೂನುಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಮುಂದೆ ಘಟಕದ ವಿರುದ್ಧವಾಗಿ ತೀರ್ಪು ಬಂದು ಕೋಟ್ಯಾಂತರ ರೂ. ಹಾನಿಯಾದರೆ ಅದಕ್ಕೆ ಅಧಿಕಾರಿಗಳು, ಇಂದಿನ ಜನಪ್ರತಿನಿಧಿಗಳು ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ.ಪಂ. ಸದಸ್ಯ ಶ್ರೀನಿವಾಸ್ ಅಮೀನ್, ಕಾಂಗ್ರೆಸ್ ಜಿಲ್ಲಾ ಹಿಂದುಳಿದ ಘಟಕದ ಅಧ್ಯಕ್ಷ ತಿಮ್ಮ ಪೂಜಾರಿ, ಉಪಾಧ್ಯಕ್ಷ ನಾಗೇಂದ್ರ ಪುತ್ರನ್, ದಿನೇಶ್ ಗಾಣಿಗ ಕೋಟ, ಮಹೇಶ್ ಪೂಜಾರಿ, ಸಂತೋಷ್ ಪೂಜಾರಿ, ಅಶೋಕ್ ಪೂಜಾರಿ, ನಾಗರಾಜ್, ಗಣೇಶ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.