ಸತ್ಯಸಾಯಿ ಬಾಬಾ 100ನೇ ಜನ್ಮ ದಿನಾಚರಣೆ 15 ಮಂದಿಗೆ ಕೃತಕ ಕಾಲು ವಿತರಣೆ: ಎಂ.ಪದ್ಮನಾಭ ಪೈ
ಮಂಗಳೂರು: ಪುಟ್ಟಪರ್ತಿಯ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 100ನೇ ಜನ್ಮ ದಿನಾಚರಣೆ(ನ.23) ಅಂಗವಾಗಿ ಮಂಗಳೂರಿನ ಮಣ್ಣಗುಡ್ಡದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಹಾಗೂ ಈಶ್ವರಾಂಬಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ವಿವಿಧ ಸೇವಾ ಚಟುವಟಿಕೆ ಹಮ್ಮಿಕೊಂಡಿದ್ದು, ವೆನ್ಲಾಕ್ನ ಲಯನ್ಸ್ ಲಿಂಬ್ ಸೆಂಟರ್ ಸಹಯೋಗದಲ್ಲಿ ಅ.30ರಂದು ಮಧ್ಯಾಹ್ನ ೩ಕ್ಕೆ ಮಣ್ಣಗುಡ್ಡೆಯ ಶ್ರೀ ಸತ್ಯಸಾಯಿ ಮಂದಿರದಲ್ಲಿ 15 ಅರ್ಹ ಫಲಾನುಭವಿಗಳಿಗೆ ಕೃತಕ ಕಾಲು ವಿತರಿಸಲಾಗುವುದು ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಕರ್ನಾಟಕ ಉತ್ತರ ರಾಜ್ಯಾಧ್ಯಕ್ಷ ಎಂ.ಪದ್ಮನಾಭ ಪೈ ತಿಳಿಸಿದರು.
ಸಮಾಜದ ಒಳಿಗಾಗಿ ಬದುಕನ್ನೇ ಮೀಸಲಿಟ್ಟ ಶ್ರೀ ಸತ್ಯಸಾಯಿ ಬಾಬಾ ಅವರ 100ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ 100 ಮಂದಿ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣೆ ಸಲಕರಣೆಯನ್ನು ಉಚಿತವಾಗಿ ವಿತರಿಸಲು ಉದ್ದೇಶಿಸಲಾಗಿದೆ. ದಿವ್ಯಾಂಗ್ಜನ್ ಸೇವಾ ಹೆಸರಿನಡಿ ಈ ಯೋಜನೆ ಕಾರ್ಯಗತಗೊಳ್ಳುತ್ತಿದ್ದು, ಈಗಾಗಲೇ 19 ಅರ್ಹ ಫಲಾನುಭವಿಗಳಿಗೆ ಕೃತಕ ಕಾಲು ವಿತರಿಸಲಾಗಿದೆ. ಈ ವರ್ಷ 100 ಜನರಿಗೆ ಕೃತಕ ಕಾಲು ವಿತರಿಸಲು ಸಂಕಲ್ಪ ಮಾಡಲಾಗಿದೆ ಎಂದರು.
ಅಗತ್ಯವುಳ್ಳವರಿಗೆ ರಕ್ತ ಒದಗಿಸಲು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಲಿಕ್ವಿಡ್ ಲವ್ ಎಂಬ ಪೋರ್ಟಲ್ ಪ್ರಾರಂಭಿಸಿದೆ. ಇದು ಸೇವಾ ರಕ್ತದಾನಿಗಳು ಮತ್ತು ರಕ್ತದ ಅವಶ್ಯಕತೆ ಇರುವವರನ್ನು ಜೋಡಿಸುವ ವೇದಿಕೆಯಾಗಿದೆ. ರೋಗಿಗಳು ಅಥವಾ ಅವರ ಸಹಾಯಕರು ರಕ್ತದ ಬೇಡಿಕೆಯನ್ನು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬಹುದು. ಸೇವಾದಳದ ಸದಸ್ಯರು ರಕ್ತ ಒದಗಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.
ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮುಂದಿನ ಮೂರು ವರ್ಷಗಳಲ್ಲಿ 10 ಮಿಲಿಯನ್ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುವ ಮಹತ್ವದ ಯೋಜನೆ ‘ಪ್ರೇಮ ತರು’ವನ್ನು ರೂಪಿಸಲಾಗಿದೆ. ‘ನಾರಾಯಣ ಸೇವೆ’ ಯೋಜನೆಯಡಿ ಪ್ರತಿ ಭಾನುವಾರ ಮಂದಿರದ ವತಿಯಿಂದ ಉಪಾಹಾರ ತಯಾರಿಸಿ ನಿರ್ಗತಿಕರಿಗೆ ಹಾಗೂ ಅವಶ್ಯಕತೆ ಇರುವವರಿಗೆ ವಿತರಿಸುವುದು, ‘ನಿತ್ಯ ನಾರಾಯಣ ಸೇವೆ’ ಯೋಜನೆಯಡಿ ಭಕ್ತರು ದಿನಕ್ಕೊಬ್ಬರಂತೆ ತಮ್ಮ ಮನೆಯಲ್ಲೇ ಉಪಾಹಾರ ತಯಾರಿಸಿ ನಿರ್ಗತಿಕರಿಗೆ ನೀಡುವುದು ಮೊದಲಾದ ಸೇವಾ ಚಟುವಟಿಕೆ ನಡೆಸಲಾಗುತ್ತಿದೆ ಎಂದರು.
ಪ್ರೇಮ ಪ್ರವಾಹಿನಿ ರಥ..
ಭಗವಾನ್ ಸತ್ಯಸಾಯಿ ಬಾಬಾ ಅವರ 100ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಪುಟ್ಟಪರ್ತಿಯಿಂದ ರಾಷ್ಟ್ರಾದ್ಯಂತ ‘ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ’ ಹೆಸರಿನಲ್ಲಿ ಐದು ವಿಶೇಷ ರಥಗಳು ಸಂಚರಿಸುತ್ತಿವೆ. ದಕ್ಷಿಣ ಭಾರತದಾದ್ಯಂತ ಸಂಚರಿಸುತ್ತಿರುವ ಒಂದು ರಥ 2026ರ ಮಾರ್ಚ್ ತಿಂಗಳಿನಲ್ಲಿ ಮಂಗಳೂರಿಗೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ.
ರಾಜ್ಯ ಪದಾಧಿಕಾರಿ ನಿರಂಜನ ಹೆಬ್ಬಾರ್, ಮಂಗಳೂರು ಸಮಿತಿ ಸದಸ್ಯರಾದ ದೇವಾನಂದ ರೈ, ಆನಂದ ರೈ, ವಿನಯ್ ಶೇಟ್, ದುರ್ಗಾಪ್ರಸಾದ್, ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.